Advertisement

ವೇಗಧೂತ ಬಸ್‌ ನಿಲುಗಡೆಗೆ ಆಗ್ರಹಿಸಿ ಪ್ರತಿಭಟನೆ

04:02 PM Feb 11, 2020 | Suhan S |

ಕಾರಟಗಿ: ಸಮೀಪದ ಮರ್ಲಾನಹಳ್ಳಿ ಗ್ರಾಮಕ್ಕೆ ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡದಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಸೋಮವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

Advertisement

ಗಂಗಾವತಿ, ರಾಯಚೂರು ಮಾರ್ಗದ ರಾಜ್ಯ ಹೆದ್ದಾರಿಯಲ್ಲಿರುವ ಮರ್ಲಾನಹಳ್ಳಿ ಗ್ರಾಮ ಸೇರಿದಂತೆ ಯರಡೋಣಾ, ಹುಳಿRಹಾಳ, ಕಿಂದಿಕ್ಯಾಂಪ್‌, ಎಚ್‌. ಬಸವಣ್ಣಕ್ಯಾಂಪ್‌, ಮಾರಿಕ್ಯಾಂಪ್‌, ಹೊಸಜೂರಟಗಿ, ರವಿನಗರ, ಹಗೆದಾಳ, ತೊಂಡಿಹಾಳ ಸೇರಿ ವಿವಿಧ ಗ್ರಾಮ ಮತ್ತು ಕ್ಯಾಂಪ್‌ಗ್ಳ ಸಾವಿರಾರು ಪ್ರಯಾಣಿಕರ ಅನುಕೂಲಕ್ಕಾಗಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕಲುಬುರ್ಗಿ ವಿಭಾಗಾಧಿಕಾರಿಗಳು ವೇಗಧೂತ ಬಸ್‌ ನಿಲುಗಡೆಗೆ ಸೂಚಿಸಿ ಎರಡು ತಿಂಗಳ ಹಿಂದೆಯೆ ಪತ್ರ ಬರೆದಿದ್ದರು. ಇದನ್ನು ಗಣನೆಗೆ ತೆಗೆದುಕೊಳ್ಳದೆ ಓಡಾಡುತ್ತಿದ್ದ ಬಸ್‌ಗಳ ಚಾಲಕರ ಧೋರಣೆ ಖಂಡಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಗ್ರಾಮಸ್ಥರಾದ ಸುಬ್ಟಾರಾವ್‌ ಹಾಗೂ ಇನ್ನಿತರರು ಮಾತನಾಡಿ, ಮರ್ಲಾನಹಳ್ಳಿ ಗ್ರಾಮದ ಜನಸಂಖ್ಯೆ ಹೆಚ್ಚಿದ್ದರಷ್ಟೇ ಅಲ್ಲ ಸುತ್ತಮುತ್ತಲ ಹತ್ತು ಗ್ರಾಮ, ಕ್ಯಾಂಪಗಳಿಂದಲೂ ನಿತ್ಯ ಗಂಗಾವತಿ-ರಾಯಚೂರು ಮಾರ್ಗವಾಗಿ ಸಂಚರಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಮನವಿಗೆ ಸ್ಪಂದಿಸಿ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗಾಧಿ ಕಾರಿಗಳೇ ನಿಲುಗಡೆಗೆ ಸೂಚಿಸಿದ್ದರು. ಮೇಲಾಧಿಕಾರಿಗಳ ಪತ್ರಕ್ಕೂ ಬೆಲೆ ನೀಡದ ಚಾಲಕರ ವಿರುದ್ಧ ಇಂದು ಪ್ರತಿಭಟನೆ ನಡೆಸಲಾಗಿದೆ.

ಕೊಪ್ಪಳ ಹಾಗೂ ಗಂಗಾವತಿ ವಿಭಾಗೀಯ ನಿಯಂತ್ರಣಾಧಿ ಕಾರಿಗಳು ಚಾಲಕರಿಗೆ ಕಟ್ಟುನಿಟ್ಟಾಗಿ ಸೂಚಿಸಿ ವಾಹನಗಳ ನಿಲುಗಡೆಗೆ ಮುಂದಾಗಬೇಕು. ಅಲ್ಲಿಯವರೆಗೂ ನಮ್ಮ ಪ್ರತಿಭಟನೆ ಹಿಂಡೆಯಲ್ಲ ಎಂದು ಪಟ್ಟು ಹಿಡಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಾರಟಗಿ ಠಾಣೆ ಎಎಸ್‌ಐ ಬಸವರಾಜ ನಾಯಕವಾಡಿ, ಪ್ರತಿಭಟನಾಕಾರರಿಗೆ ಸಮಾಧಾನ ಪಡಿಸಿ ರಸ್ತೆ ತೆರವುಗೊಳಿಸುವಂತೆ ಮನವಿ ಮಾಡಿಕೊಂಡರು ಗ್ರಾಮಸ್ಥರು ಪಟ್ಟು ಸಡಿಲಿಸಲಿಲ್ಲ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಸ್‌ ತಡೆಯಾಗಿದ್ದರಿಂದ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ನಂತರ ಎಎಸ್‌ಐ ಬಸವರಾಜ ನಾಯಕವಾಡಿ ಗ್ರಾಮಸ್ಥರ ಮನವೊಲಿಸಿದರು. ಶ್ರೀನಿವಾಸ , ಚಂದ್ರಶೇಖರ, ಮದನಲಾಲ್‌, ಜಗದೀಶ, ವೀರೇಶ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next