ಮೈಸೂರು: ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ಉಪ್ಪಾರ ಪರಿಶಿಷ್ಟ ಪಂಗಡ ಹೋರಾಟ ಸಮಿತಿ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಅಂದಾಜು 30 ರಿಂದ 40 ಲಕ್ಷ ಉಪ್ಪಾರ ಸಮುದಾಯದ ಜನರು ವಾಸಿಸುತ್ತಿದ್ದೇವೆ. ಆದರೆ, ಉಪ್ಪಾರ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಉಪ್ಪಾರ ಸಮುದಾಯದ ಜನರ ಪರಿಸ್ಥಿತಿ ಶೋಚನೀಯವಾಗಿದೆ.
ಬಡತನ, ನಿರುದ್ಯೋಗ, ಅನಕ್ಷರತೆಯಿಂದ ಸರ್ಕಾರದಿಂದ ಬರುವ ಅನೇಕ ಸವಲತ್ತುಗಳು ಸಮರ್ಪಕವಾಗಿ ಅರ್ಹರಿಗೆ ತಲುಪುತ್ತಿಲ್ಲ. ಹೀಗಾಗಿ ಉಪ್ಪಾರ ಸಮುದಾಯ ಸಂವಿಧಾನ ಬದ್ಧವಾದ ಸೌಲಭ್ಯ, ಸವಲತ್ತುಗಳನ್ನು ಪಡೆದು, ಪ್ರಗತಿ ಸಾಧಿಸಬೇಕಾದರೆ ಉಪ್ಪಾರ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಬೇಕೆಂದು ಆಗ್ರಹಿಸಿ ವಿವಿಧ ಘೋಷಣೆ ಕೂಗಿದರು.
ಈ ಮುನ್ನ ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸರಗೂರಿನ ಐನೂರು ಮಠದ ಚಿನ್ನಸ್ವಾಮೀಜಿ, ಸಮಿತಿ ರಾಜಾಧ್ಯಕ್ಷ ಎಸ್.ಎಸ್.ಯೋಗೇಶ್, ಜಿಲ್ಲಾಧ್ಯಕ್ಷ ಎಲ್.ಮಲ್ಲಶೆಟ್ಟಿ,
ಪ್ರಧಾನ ಕಾರ್ಯದರ್ಶಿ ಎನ್.ರಾಮಚಂದ್ರ, ಕಾರ್ಯಾಧ್ಯಕ್ಷ ಮಹದೇವಪ್ಪ, ಪ್ರಮುಖರಾದ ಕೃಷ್ಣಸ್ವಾಮಿ, ದೇವೇಗೌಡ, ಆಶಾ, ವಿಷಯಕಂಠಯ್ಯ ಸೇರಿ ಮೈಸೂರು, ಮಂಡ್ಯ, ಚಾಮರಾಜ ನಗರ ಜಿಲ್ಲೆಗಳ ಉಪ್ಪಾರ ಸಮುದಾಯದ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.