ಮುಂಡರಗಿ: ಶಿಂಗಟಾಲೂರ ಏತ ನೀರಾವರಿ ಯೋಜನೆಯ ನೀರು ನಿಲುಗಡೆಯಿಂದ ಮುಳುಗಡೆಯಾಗುವ ಬಿದರಳ್ಳಿಯ ಬಿದರಳ್ಳೆಮ್ಮ (ರೇಣುಕಾದೇವಿ) ದೇವಸ್ಥಾನ, ಗುಮ್ಮಗೋಳದ ಗೋಣಿಬಸವೇಶ್ವರ ದೇವಸ್ಥಾನ, ವಿಠ್ಠಲಾಪುರದ ರಸಲಿಂಗ ದೇವಸ್ಥಾನಗಳ ಉಳುವಿಗಾಗಿ ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ದೇವಸ್ಥಾನದ ಭಕ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹೋರಾಟದ ನೇತೃತ್ವ ವಹಿಸಿದ್ದ ವೈ.ಎನ್. ಗೌಡರ ಮಾತನಾಡಿ, ಶಿಂಗಟಾಲೂರ ಏತ ನೀರಾವರಿ ಯೋಜನೆಯ ಹಿನ್ನೀರಿನಿಂದ ಮುಳುಗಡೆ ಆಗುವ ಗುಮ್ಮಗೋಳದ ಗೋಣಿಬಸವೇಶ್ವರ ದೇವಾಲಯ, ಬಿದರಳ್ಳಿಯ ಬಿದರಳ್ಳೆಮ್ಮ (ರೇಣುಕಾದೇವಿ) ದೇವಸ್ಥಾನ ಹಾಗೂ ವಿಠ್ಠಲಾಪುರದ ರಸಲಿಂಗ ದೇವಸ್ಥಾನಗಳು ಪುರಾತನ ದೇವಸ್ಥಾನಗಳು. ಸರ್ಕಾರ ಕೂಡಲ ಸಂಗಮದ ಮಾದರಿಯಲ್ಲಿ ತಡೆಗೋಡೆ ನಿರ್ಮಿಸಿ ದೇವಸ್ಥಾನ ಸಂರಕ್ಷಿಸಬೇಕು ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ರಾಮಣ್ಣ ಲಮಾಣಿ ಅವರೊಂದಿಗೆ ಬಿದರಹಳ್ಳಿ, ಗುಮ್ಮಗೋಳ ಹಾಗೂ ವಿಠ್ಠಲಾಪುರ ಗ್ರಾಮಸ್ಥರು ವಾಗ್ವಾದಕ್ಕೆ ಇಳಿದರು. ಸರ್ಕಾರ 2010ರಲ್ಲಿ ಏತ ನೀರಾವರಿ ಯೋಜನೆಗೆ ರೈತರ ಭೂಮಿ ಹಾಗೂ ಗುಮ್ಮಗೋಳ, ಬಿದರಹಳ್ಳಿ, ಹಾಗೂ ಹೂವಿನ ಹಡಗಲಿ ತಾಲೂಕಿನ ಅಲ್ಲಿಪುರ ಗ್ರಾಮಗಳನ್ನು ಸಹ ಸ್ವಾಧೀನ ಪಡಿಸಿಕೊಂಡು ನಂತರ 2012ರಲ್ಲಿ ಪರಿಹಾರ ನೀಡಿದೆ. ಆದರೆ ನೀರಿನಲ್ಲಿ ಮುಳುಗುವ ದೇವಸ್ಥಾನಗಳ ಸಂರಕ್ಷಣೆಗಾಗಿ ಶಾಸಕರಾದ ನಿಮಗೆ ಅನೇಕ ಬಾರಿ ಮನವಿ ಮಾಡಿಕೊಂಡಿದ್ದೇವೆ, ಅಧಿಕಾರಿಗಳಿಗೂ ಮನವಿ ಮಾಡಿಕೊಂಡಿದ್ದೇವೆ. ಆದರೆ ತಾವೇ ಮೂರು ಗ್ರಾಮಸ್ಥರು ಒಮ್ಮೆ ಬೆಂಗಳೂರಿಗೆ ಬನ್ನಿ ಮುಖ್ಯಮಂತ್ರಿಗಳೊಂದಿಗೆ ಹಾಗೂ ನೀರಾವರಿ ಮಂತ್ರಿಗಳೊಂದಿಗೆ ಮಾತನಾಡೋಣವೆಂದು ಹೇಳಿ ಇಲ್ಲಿಂದ ನಮ್ಮನ್ನು ಬೆಂಗಳೂರಿಗೆ ಕರೆಯಿಸಿಕೊಂಡು, ಫೋನ್ ಮಾಡಿದರು ಸಹ ಯಾವುದೇ ಸ್ಪಂದನೆ ಮಾಡಲಿಲ್ಲ. ವಿನಾಕಾರಣ ನಿಮ್ಮ ಮಾತು ನಂಬಿ ಬೆಂಗಳೂರಿಗೆ ಹಣ ಖರ್ಚು ಮಾಡಿಕೊಂಡು ಹೋಗಿ ಬಂದೆವು, ಕಳೆದ 4 ವರ್ಷಗಳಿಂದ ಬರಿ ಸುಳ್ಳು ಹೇಳುತ್ತಿದ್ದೀರಿ, ಮುಳುಗಡೆ ಪ್ರದೇಶವೆಂದು ಮೂರು ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಶಾಸಕ ರಾಮಣ್ಣ ಲಮಾಣಿ ಪ್ರತಿಕ್ರಿಯಿಸಿ, ಬಿದರಳ್ಳಿಯ ಬಿದರಳ್ಳೆಮ್ಮ (ರೇಣುಕಾದೇವಿ) ದೇವಸ್ಥಾನ, ಗುಮ್ಮಗೋಳದ ಗೋಣಿಬಸವೇಶ್ವರ ದೇವಸ್ಥಾನಗಳ ಸಂರಕ್ಷಣೆಗಾಗಿ ಆಯಾ ಗ್ರಾಮದ ಜನರ ಅಭಿಪ್ರಾಯದಂತೆ ಎರಡು ದೇವಸ್ಥಾನಗಳಿಗೆ ತಡೆಗೋಡೆ ನಿರ್ಮಿಸುವುದಕ್ಕೆ ಏತ ನೀರಾವರಿ ಇಲಾಖೆ ಅಧಿಕಾರಿಗಳಿಂದ ಸರ್ವೇ ಮಾಡಿಸಿ 35 ಕೋಟಿ ರೂ. ಅಂದಾಜು ಪ್ರತಿ ನೀಲನಕ್ಷೆ ತಯಾರಿಸಿ ಈಗಾಗಲೇ ಸಿಎಂ ಹಾಗೂ ಭಾರಿ ನೀರಾವರಿ ಸಚಿವರಿಗೆ ಸಲ್ಲಿಸಲಾಗಿದೆ. ಸಿಎಂ ಮತ್ತು ನೀರಾವರಿ ಸಚಿವರು ಸಹ ಆಶ್ವಾಸನೆ ನೀಡಿದ್ದಾರೆ. ಶೀಘ್ರವೇ ಸರ್ಕಾರದ ಅನುಮೋದನೆ ಪಡೆಯುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಇದೇ ವೇಳೆ ಶಾಸಕ ರಾಮಣ್ಣ ಲಮಾಣಿ ಹಾಗೂ ತಹಶೀಲ್ದಾರ್ ಡಾ| ಆಶಪ್ಪ ಪೂಜಾರ, ಏತ ನೀರಾವರಿ ಇಲಾಖೆಯ ಪುನರ್ ವಸತಿ ವಿಭಾಗದ ಅಧಿಕಾರಿಗಳಾದ ಬಿ. ವಿನಯಕುಮಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಗುಮ್ಮಗೋಳದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ರವೀಂದ್ರಗೌಡ ಪಾಟೀಲ, ಸತ್ಯಪ್ಪ ಕುರಗೋಡ, ಪರಸಪ್ಪ ಆಣೆಪ್ಪನವರ, ಸತ್ಯಪ್ಪ ನೀಲಗಾರ, ಮಂಜಪ್ಪ ಭಜಂತ್ರಿ, ಶರಣಪ್ಪ ಬಡ್ನಿ, ಪಕ್ಕಣ್ಣ ಗುಜ್ಜಲ, ನಿಂಗರಾಜ ಬಸೆಗೌಡ್ರ, ಕುಮಾರಗೌಡ ಪಾಟೀಲ, ಮಂಜಪ್ಪ ಹಾರೊಗೇರಿ, ಕುಮಾರ ಅಂಗಡಿ, ಚನ್ನಬಸಪ್ಪ ಹೂಗಾರ, ನಾಗರಾಜ ಮಾಗಳದ, ಡಿ.ಡಿ. ಮೋರನಾಳ, ದೃವಕುಮಾರ ಹೊಸಮನಿ, ಶ್ರೀಕಾಂತಗೌಡ ಪಾಟೀಲ, ಶಾಂತಪ್ಪ ರಾಟಿ, ವಿರೂಪಾಕ್ಷ ಜೋಗೇರ, ರಾಘವೇಂದ್ರ ಮತ್ತೂರು, ರಾಜು ಡಾವಣಗೇರಿ, ರಾಮು ಕಲಾಲ್, ರವೀಂದ್ರಗೌಡ ಪಾಟೀಲ, ಶೇಖಪ್ಪ ಕುರುಬರ, ಶಿವನಗೌಡ ಪಾಟೀಲ, ಶಿವಕುಮಾರಗೌಡ ಪಾಟೀಲ, ಶೇಖಪ್ಪ ಗುಜ್ಜಟ್ಟಿ, ರೇವಣಪ್ಪ ಬೂದಿಹಾಳ ಇನ್ನಿತರರಿದ್ದರು.