ಗುಂಡ್ಲುಪೇಟೆ: ಪ್ರತ್ಯೇಕವಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ಕೂತನೂರು ಗ್ರಾಮದ ಹೆದ್ದಾರಿ ರಸ್ತೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ಕೂತನೂರು ಗ್ರಾಮದ ಗುಂಡ್ಲುಪೇಟೆ-ಕೇರಳ ಹೆದ್ದಾರಿಯ ಬಸ್ ನಿಲ್ದಾಣದ ಮುಂದೆ ಜಮಾವಣೆಗೊಂಡ ನೂರಕ್ಕು ಅಧಿಕ ವಿದ್ಯಾರ್ಥಿಗಳು ಈ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್‌ಗಳನ್ನು ತಡೆದು ಡಿಪೋ ವ್ಯವಸ್ಥಾಪಕರ ವಿರುದ್ಧ ಆಕ್ರೋಶ ಹೊರಹಾಕಿ ಪ್ರತ್ಯೇಕ ಬಸ್ ಸೌಲಭ್ಯಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ಕೂತನೂರು ಗ್ರಾಮದಿಂದ ಶಾಲಾ-ಕಾಲೇಜಿಗೆ ನೂರಕ್ಕಿಂತ ಹೆಚ್ಚು ಮಂದಿ ತೆರಳುತ್ತಿದ್ದರು ಸಹ ಪ್ರತ್ಯೇಕವಾಗಿ ಬಸ್ ಸೌಲಭ್ಯ ಕಲ್ಪಿಸಿಲ್ಲ. ಈ ಬಗ್ಗೆ ಡಿಪೋ ವ್ಯವಸ್ಥಾಪಕರಿಗೆ ಈಗಾಗಲೇ ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಕೂಡ ಕ್ರಮ ವಹಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು. ಪ್ರತ್ಯೇಕವಾಗಿ ಬಸ್ ಇಲ್ಲದ ಕಾರಣ ಬೇರಂಬಾಡಿ ಮೂಲಕ ಬರುವ ಬಸ್ ಅವಲಂಬಿಸಬೇಕಾಗಿದೆ. ಆ ಬಸ್ ಕೂಡ ಬೆಳಗಿನ ಸಮಯ ಅಧಿಕ ಮಂದಿ ಪ್ರಯಾಣಿಕರನ್ನು ತುಂಬಿಕೊಂಡು ಬರುವ ಹಿನ್ನೆಲೆ ಕೂತನೂರು ಬಳಿ ನಿಲುಗಡೆ ಮಾಡದೆ ತೆರಳುತ್ತದೆ. ಈ ಕಾರಣದಿಂದ ಸರಿಯಾದ ಸಮಯಕ್ಕೆ ತರಗತಿಗಳಿಗೆ ಹೋಗಲು ಆಗುತ್ತಿಲ್ಲ. ಜೊತೆಗೆ ಖಾಸಗಿ ಆಟೋಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿಗಳಲ್ಲದೆ ಗ್ರಾಮಸ್ಥರೂ ಕೂಡ ಸಮಯಕ್ಕೆ ಸರಿಯಾಗಿ ಬಸ್ ಇಲ್ಲದೆ ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೂತನೂರು ಗ್ರಾಮಕ್ಕೆ ಪ್ರತ್ಯೇಕವಾಗಿ ಬಸ್ ಬಿಡಬೇಕು ಎಂದು ಆಗ್ರಹಿಸಿದರು. ಗುಂಡ್ಲುಪೇಟೆ ಡಿಪೋ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಡಿಪೋ ವ್ಯವಸ್ಥಾಪಕರಾದ ಪುಷ್ಪಾ ಮಾತನಾಡಿ, ಈ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ವಿವಿಧ ಶಾಲಾ-ಕಾಲೇಜಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.