ಪಿರಿಯಾಪಟ್ಟಣ: ಕೆರೆಗಳ ಹರಾಜು ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಶಿವಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.
ತಾಲೂಕಿನ ಚಿಕ್ಕನೇರಳೆ ಗ್ರಾಪಂಗೆ ಒಳಪಡುವ ಕೆರೆಗಳ ಹರಾಜು ಮಾಡದಂತೆ ಮಂಟಿ ಬಿಳಗುಲಿ ಗ್ರಾಮಸ್ಥರಿಂದ 2 ತಿಂಗಳ ಹಿಂದೆ ತಕರಾರು ಅರ್ಜಿ ಸಲ್ಲಿಸಿದರೂ ನಮಗೆ ಯಾವುದೇ ಮಾಹಿತಿ ನೀಡದೆ ಕಾನೂನು ಉಲ್ಲಂ ಸಿ ಹರಾಜು ಪ್ರಕ್ರಿಯೆ ನಡೆದಿದೆ ಎಂದು ಆಪಾದಿಸಿದ್ದಾರೆ.
10 ವರ್ಷಗಳಿಂದಲೂ ಹಸುವಿನ ಕಾವಲು ಗ್ರಾಮದ ದೊಡ್ಡಕೆರೆ ಹಾಗೂ ಬಾಲಗೆರೆ ಕೆರೆಗಳನ್ನು ಹರಾಜು ಮಾಡದೆ ಹಾಗೆಯೇ ಮುಂದುವರಿಸಿಕೊಂಡು ಹೋಗುತ್ತಿರುವ ವ್ಯಕ್ತಿಗೆ ಮಂಟಿ ಬೆಳಗುಲಿ ಗ್ರಾಮಕ್ಕೆ ಒಳಪಡುವ ಕೆರೆಗಳನ್ನು ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡದೇ ಅವರಿಗೆ ಕಡಿಮೆ ಬೆಲೆಯಲ್ಲಿ ಹರಾಜು ಆಗುವಂತೆ ಮಾಡಿದ್ದಾರೆ ಎಂದು ಮಂಟಿ ಬಿಳಗುಲಿ ಗ್ರಾಮದ ಮುಖಂಡ ರವೀಂದ್ರ ಹಾಗೂ ಹಸುವಿನ ಕಾವಲು ಗ್ರಾಮದ ಗೋವಿಂದರಾಜು ದೂರಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ ಸರ್ಕಾರದ ನಿಯಮ ಪಾಲಿಸದೆ ಗ್ರಾಮದಲ್ಲಿ ತಮಟೆ ಮೂಲಕ ಪ್ರಚಾರ ಮಾಡದೆ ಮತ್ತು ಪತ್ರಿಕೆಗಳಲ್ಲಿ ಪ್ರಕಟಣೆ ನೀಡದೆ ಗ್ರಾಮಸ್ಥರಿಗೆ ಹಾಗೂ ಈ ಹಿಂದೆ ಕೆರೆಯ ಹರಾಜು ಮಾಡಿಕೊಂಡಿದ್ದ ಮಾಲೀಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಮುಖಂಡ ಜಗದೀಶ್ ದೂರಿದರು.
ಪಂಚಾಯಿತಿಯ ಸೂಚನಾ ಫಲಕದಲ್ಲಿ ಹರಾಜು ಮಾಡುವ ದಿನಾಂಕವನ್ನು ಪ್ರಕಟಿಸದೆ ಹರಾಜು ಮಾಡಿದ್ದಾರೆ ಎಂದು ಕಿರಣ್ ಕಿಡಿಕಾರಿದರು. ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಾತನಾಡಿ, ಮೇಲಧಿಕಾರಿಗಳು ಈ ಹರಾಜಿನಲ್ಲಿ ಆಗಿರುವ ಲೋಪದೋಷಗಳನ್ನು ಪರಿಶೀಲಿಸಿ ತನಿಖೆ ನಡೆಸಿ, ಮರು ಹರಾಜಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಿಡಿಒ ಎಚ್.ನಾರಾಯಣ್, ಸಾರ್ವಜನಿಕರ ಹಿತದೃಷ್ಟಿಯಿಂದ ಕೆರೆಯ ಸಂಪನ್ಮೂಲಗಳನ್ನು ವೃದ್ಧಿಗೊಳಿಸಲು ಕಾನೂನಾತ್ಮಕವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ತಾಪಂ ಮಾಜಿ ಉಪಾಧ್ಯಕ್ಷ ಪುಟ್ಟಸ್ವಾಮಿ, ಅಮಾನುಲ್ಲಾ ಖಾನ್, ಫಾಸಿಲ್, ಜ್ಯೋತಿಕುಮಾರ್, ಗೋವಿಂದರಾಜ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.