ಯಾದಗಿರಿ: ಅಡುಗೆ ಎಣ್ಣೆ, ಬೇಳೆ ಕಾಳು, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಲು ಮತ್ತು ಜಿಲ್ಲೆಯ ರೈತರು, ಕಾರ್ಮಿಕರು ಮತ್ತು ಜನಸಾಮಾನ್ಯರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ಎಸ್ ಯುಸಿಐ (ಸಿ) ಪಕ್ಷದಿಂದ ಪ್ರತಿಭಟಿಸಲಾಯಿತು.
ನಗರದ ಕನಕ ವೃತ್ತದಿಂದ ಹೊರಟ ಪ್ರತಿಭಟನಾ ರ್ಯಾಲಿ ತಹಶೀಲ್ದಾರ್ ಕಚೇರಿ ಎದುರು ಸಮಾವೇಶಗೊಂಡಿತು. ನಂತರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಲಾಯಿತು.
ರಾಜ್ಯದಲ್ಲಿನ ಈಗಿನ ಕಠಿಣ ಪರಿಸ್ಥಿಯಲ್ಲಿ ಜನಸಾಮಾನ್ಯರ ಕುಟುಂಬಗಳ ನಿರ್ವಹಣೆಗೆ, ಅವರ ಜೀವನಾಧಾರಕ್ಕೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಹಲವು ಲಕ್ಷ ಹುದ್ದೆಗಳನ್ನು ಭರ್ತಿ ಮಾಡದೆ ಖಾಲಿ ಬಿಡಲಾಗಿದೆ. ಹಣದ ಕೊರತೆ ನೆಪವಾಗಿಸಿಕೊಂಡು ಸರ್ಕಾರಿ, ಅರೆ ಸರ್ಕಾರಿ, ಕೃಷಿ ವಲಯಗಳಿಗೆ ಅನುದಾನ ನೀಡದೇ ಇರುವುದರಿಂದ ಹೊಸ ಹೊಸ ಉದ್ಯೋಗಗಳ
ಸೃಷ್ಟಿ ಸಂಪೂರ್ಣ ನಿಂತು ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನಸಾಮಾನ್ಯರು, ರೈತರು, ಕಾರ್ಮಿಕರು ಎದುರಿಸುತ್ತಿರುವ ಹಲವಾರು ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿ ರಾಜ್ಯದಾದ್ಯಂತ ಜನಾಂದೋಲನಕ್ಕೆ ಕರೆ ನೀಡಿದೆ. ಮಾರ್ಚ್ 19, 2021 ರಂದು ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಸಲಿದೆ ಎಂದು ಎಸ್‌ಯುಸಿಐ ಜಿಲ್ಲಾ
ಕಾರ್ಯದರ್ಶಿ ಕೆ. ಸೋಮಶೇಖರ ಹೇಳಿದರು. ಪ್ರತಿಭಟನೆಯಲ್ಲಿ ನೂರಾರು ಕಾರ್ಮಿಕರು ಭಾಗವಹಿಸಿದ್ದರು.