Advertisement
ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ವೃಷಭೇಂದ್ರಪ್ಪ ನೇತೃತ್ವದಲ್ಲಿ ನ್ಯಾಯ ಬೆಲೆ ಅಂಗಡಿ ಮಾಲೀಕರು ಸೇರಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಮಿತಿ ನಿಯಮಿತದ ಕಚೇರಿಗೆ 9 ತಿಂಗಳ ಬಾಕಿ ಹಣವನ್ನು ಕೇಳುವ ಸಲುವಾಗಿ ಆಗಮಿಸಿದ್ದಾಗ ನಿಯಮಿತದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಗೈರು ಹಾಜರಾಗಿದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು.
Related Articles
Advertisement
ಅಧಿಕಾರಿಗಳೇ ಗೈರು: ಸಂಘದ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಮಾತನಾಡಿ, ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬರಬೇಕಾಗಿರುವ ಬಾಕಿ ಹಣವನ್ನು ಕೊಡುವುದಾಗಿ ನಿಯಮಿತದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಅವರಲ್ಲಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡುವ ಸಲುವಾಗಿ ಎಲ್ಲಾ ಸದಸ್ಯರು ಬಂದು ಅಧಿಕಾರಿಗಳಿಲ್ಲದೆ ಬಂದ ದಾರಿಗೆ ಸುಂಕವಿಲ್ಲದಂತೆ ತೆರಳುವಂತೆ ಮಾಡಿದ್ದಾರೆಂದು ಆರೋಪಿಸಿದರು.
ಹೋರಾಟದ ಎಚ್ಚರಿಕೆ: ನ್ಯಾಯಬೆಲೆ ಅಂಗಡಿಯ ಸುಮಾರು 93 ಮಾಲೀಕರಿಗೆ 9 ತಿಂಗಳ ಬಾಕಿ ಹಣ 87 ಲಕ್ಷ ರೂ. ನೀಡಬೇಕಾಗಿದ್ದು, 10 ದಿನಗಳ ಒಳಗಾಗಿ ಬಿಡುಗಡೆ ಮಾಡದಿದ್ದರೆ ಕಚೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಕೂಡಲೇ ಹಣ ನೀಡಲಿ: ಕಳೆದ 2018ರಲ್ಲಿ ಗೋದಾಮು ಅಧಿಕಾರಿಗಳ ನಿರ್ಲಕ್ಷ್ಯಯಿಂದ ಕೋಟ್ಯಂತರ ರೂ. ದುಬಳìಕೆಯಾಗಿರುವ ವಿಷಯ ಹೊರ ಬರುತ್ತಿದ್ದಂತೆ ಜಿಲ್ಲಾಧಿಕಾರಿಗಳ ತಂಡ ಭೇಟಿ ನೀಡಿ ಗೋದಾಮಿನಲ್ಲಿದ್ದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದು ಬೀಗ ಜಡಿದು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕೆಎಸ್‌ಎಫ್ಸಿ ಗೋದಾಮಿಗೆ ವರ್ಗಾಯಿಸಿದ ಬಳಿಕ ಪ್ರತಿ ತಿಂಗಳು ಬರಬೇಕಾಗಿರುವ ಲಾಭದ ಹಣ ಬರುತ್ತಿದೆ. ಕಳೆದ ವರ್ಷದ ಬಾಕಿ ಹಣ ಮಾತ್ರ ಬರದೆ ಇದ್ದು, ಕೂಡಲೇ ಮಂಜೂರು ಮಾಡಬೇಕು ಇಲ್ಲವಾದ ಪಕ್ಷದಲ್ಲಿ ಟಿಎಪಿಸಿಎಂಎಸ್ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಕಾರ್ಯದರ್ಶಿ ಮರಿಸ್ವಾಮಿ, ಸಹಕಾರ್ಯದರ್ಶಿ ಶಾಂತರಾಜು, ಮುಖಂಡರಾದ ಆನಂದ್, ಜಗದೀಶ ನಾಯಕ, ಶಿವಣ್ಣ, ಸಿದ್ದರಾಜು, ಇತರರು ಇದ್ದರು.