Advertisement

ಬಿಜೆಪಿ ಸರ್ಕಾರ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

02:23 PM Apr 14, 2022 | Team Udayavani |

ಬಾಗಲಕೋಟೆ: ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಕಾನೂನು ಸುವ್ಯವಸ್ಥೆಯೂ ಸಂಪೂರ್ಣ ಹದಗೆಟ್ಟಿದೆ. ಕೂಡಲೇ ಬಿಜೆಪಿ ಸರ್ಕಾರ ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಒತ್ತಾಯಿಸಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಆಮ್‌ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ಸಂವಿಧಾನದಡಿ ಪ್ರಜೆಗಳ ಇಚ್ಛೆಯಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ರಾಜ್ಯ ಮುನ್ನಡೆಸುವುದು ಪ್ರಜಾ ಸರ್ಕಾರದ ಕರ್ತವ್ಯ. ಆದರೆ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಸಾರ್ವತ್ರಿಕಗೊಳಿಸಿದೆ. ಸಂವಿಧಾನದ ಆಶಯದಂತೆ ಸಾರ್ವಭೌಮ, ಸಮಜವಾದ, ರಾಷ್ಟ್ರವಾದ ದೇಶದಲ್ಲಿ ಕೋಮು-ಸಂಘಟನೆ ಎತ್ತಿ ಕಟ್ಟುವ ಮೂಲಕ ಧಾರ್ಮಿಕ ಸಂಘರ್ಷ ಹುಟ್ಟು ಹಾಕಿ, ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದ ಯುವಕ ಹರ್ಷನ ಕೊಲೆ, ನರಗುಂದ ನಗರದ ಯುವಕ ಸಮೀರ್‌ ಶಹಾಪುರನ ಹತ್ಯೆ ಹಾಗೂ ಬೆಂಗಳೂರಿನ ಚಂದ್ರು ಎಂಬ ಯುವಕನ ಕೊಲೆಯಾಗಿದೆ. ಇದೀಗ ಬೆಳಗಾವಿಯ ಪ್ರಥಮ ದರ್ಜೆ ಗುತ್ತಿಗೆದಾರ, ಹಿಂದೂ ಕಾರ್ಯಕರ್ತ ಸಂತೋಷ ಪಾಟೀಲ ಎಂಬಾತನ ಆತ್ಮಹತ್ಯೆಗೆ ಸರ್ಕಾರದ ಅತಿಯಾದ ಭ್ರಷ್ಟಾಚಾರವೇ ಕಾರಣ. ಗ್ರಾಮೀಣಾಭಿವೃದ್ಧಿ ಮತ್ತು ನೀರಾವರಿ ಇಲಾಖೆಯಲ್ಲಿ ನಡೆಯುತ್ತಿರುವ ಶೇ.40 ಕಮಿಷನ್‌ ವ್ಯವಹಾರದಿಂದ ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಇಲಾಖೆ ಸಚಿವ ಈಶ್ವರಪ್ಪ ಅವರೇ ನೇರ ಹೊಣೆ. ಅಲ್ಲದೇ ಆತ್ಮಹತ್ಯೆಗೂ ಮುಂಚೆ ನನ್ನ ಸಾವಿಗೆ ಸಚಿವರೇ ನೇರ ಕಾರಣ ಎಂದು ಬರೆದಿಟ್ಟಿದ್ದಾರೆ. ಹೀಗಾಗಿ ಸಚಿವ ಈಶ್ವರಪ್ಪ ವಿರುದ್ಧ ಭಾರತೀಯ ದಂಡ ಸಹಿಂತೆ 302, 306ರ ಅಡಿ ಕೊಲೆ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ 7 ಮತ್ತು 9ರ ಅಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು.

ಈ ವೇಳೆ ಆಮ್‌ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಚಂದ್ರ ನರಬೆಂಚಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅರವಿಂದ ಮುಚಖಂಡಿ ಸೇರಿದಂತೆ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next