Advertisement

ಅಡಕೆ ಆಮದು ರದ್ದತಿಗೆ ಒತ್ತಾಯಿಸಿ ಪ್ರತಿಭಟನೆ

04:27 PM Oct 15, 2022 | Nagendra Trasi |

ಶಿವಮೊಗ್ಗ: ಕೇಂದ್ರ ಸರ್ಕಾರ ಅಡಿಕೆ ಆಮದು ರದ್ದುಗೊಳಿಸಬೇಕು. ಎಲೆಚುಕ್ಕಿ ರೋಗಕ್ಕೆ ಪರಿಹಾರ ನೀಡಬೇಕು. ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರುಸೇನೆ, ಅಡಿಕೆ ಮಾರಾಟ ಸಹಕಾರ ಸಂಘಗಳ ಒಕ್ಕೂಟದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಬಸ್‌ ನಿಲ್ದಾಣದಿಂದ ನೂರಾರು ಸಂಖ್ಯೆಯಲ್ಲಿ ರೈತರು ಮತ್ತು ಅಡಿಕೆ ಮಾರಾಟ ಸಹಕಾರ ಸಂಘಗಳ ಸದಸ್ಯರು ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರ ಭೂತಾನ್‌ ನಿಂದ 17 ಸಾವಿರ ಮೆಟ್ರಿಕ್‌ ಟನ್‌ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲು ಒಪ್ಪಿಕೊಂಡಿದೆ.

ಇದರಿಂದ ರೈತರಿಗೆ ತೊಂದರೆಯಾಗುತ್ತದೆ. ಈಗ 17 ಸಾವಿರ, ಮುಂದಿನ ದಿನಗಳಲ್ಲಿ ಇದು 50 ಸಾವಿರ ಮೆಟ್ರಿಕ್‌ ಟನ್‌ ಆಗಬಹುದು. ಆಮದು ಸುಂಕವಿಲ್ಲದೆ ಅನುಮತಿ ನೀಡಿರುವುದರಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆಯೂ ಬರುವುದಿಲ್ಲ. ನಮ್ಮ ದೇಶದ ಅಡಿಕೆ ಬೆಲೆ ಕೂಡ ಕಡಿಮೆಯಗುತ್ತದೆ. ಹೀಗೆ ಎಂಐಪಿ ಷರತ್ತು ಇಲ್ಲದೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಸರಿಯಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿಯೇ ಸಾಕಷ್ಟು ಅಡಿಕೆ ಬೆಳೆಯುತ್ತೇವೆ. ಜೊತೆಗೆ ರಫ್ತು ಕೂಡ ಮಾಡಬಹುದಾಗಿದೆ. ಹೀಗಿದ್ದೂ ಆಮದು ಮಾಡಿಕೊಳ್ಳುವುದು ಸರಿಯಲ್ಲ. ಈಗಾಗಲೇ ರಾಜ್ಯದ ಗೃಹಮಂತ್ರಿ ಹಾಗೂ ಅಡಿಕೆ ಕಾರ್ಯಪಡೆ ಅಧ್ಯಕ್ಷರಾಗಿರುವ ಆರಗ ಜ್ಞಾನೇಂದ್ರ ಕೇಂದ್ರ ಸರ್ಕಾರಕ್ಕೆ ನಿಯೋಗ ಕರೆದೊಯ್ಯಲಾಗುವುದು ಎಂದಿರುವುದು ಸ್ವಾಗತಾರ್ಹ. ಆದಷ್ಟು ಬೇಗ ನಿಯೋಗ ಹೋಗಬೇಕು. ತಕ್ಷಣ ಈ ಆಮದು ನೀತಿ ರದ್ದುಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು.

ಅಡಿಕೆಗೆ ಎಲೆಚುಕ್ಕಿ ರೋಗ ತೀವ್ರವಾಗಿ ಬಾಧಿಸುತ್ತಿದೆ. ಬೆಳೆ ಕೂಡ ನಾಶವಾಗಿದೆ. ಮರಗಳೇ ಸಾಯತೊಡಗಿವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಕೇವಲ 10 ಕೋಟಿ ರೂ. ಮಂಜೂರು ಮಾಡಿ ಔಷಧಕ್ಕಾಗಿ ಹೆಕ್ಟೇರಿಗೆ 4 ಸಾವಿರ ನೀಡುತ್ತಿದೆ. ಇದು ಯಾವುದಕ್ಕೂ ಸಾಲುವುದಿಲ್ಲ. ಕನಿಷ್ಟ 100 ಕೋಟಿ ರೂ.ಗಳಿಗೆ ಹೆಚ್ಚಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

Advertisement

ಅಲ್ಲದೆ ಹಳದಿರೋಗ, ಬೇರುಹುಳು ರೋಗ, ಕೊಳೆರೋಗ ಮುಂತಾದವುಗಳಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಅಡಿಕೆ ಬೆಳೆಗಾರರ ಅನುಕೂಲಕ್ಕಾಗಿ ಶಿವಮೊಗ್ಗದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ, ಸಹ್ಯಾದ್ರಿ ಅಡಿಕೆ ಸಹಕಾರ ಸಂಘದ ಅಧ್ಯಕ್ಷ ಎಚ್‌.ಎನ್‌. ವಿಜಯ್‌ ದೇವ್‌, ಅಡಿಕೆ ಪರಿಷ್ಕರಣ ಮಾರಾಟ ಸಂಘದ ಕೆ.ಎಂ. ಸೂರ್ಯನಾರಾಯಣ, ಪ್ರಮುಖರಾದ ತೀ.ನ. ಶ್ರೀನಿವಾಸ, ಸಿ. ಮಲ್ಲೇಶಪ್ಪ, ಬಿ.ಕೆ. ಶಿವಕುಮಾರ್‌, ಹಿಟ್ಟೂರು ರಾಜು, ಟಿ.ಎಂ. ಚಂದ್ರಪ್ಪ, ಈಶಣ್ಣ, ಶಿವಮೂರ್ತಿ, ಜಗದೀಶ್‌, ಕೆ.ಪಿ. ಶ್ರೀಪಾಲ್‌, ಕೆ. ರಾಘವೇಂದ್ರ, ಈ.ಬಿ. ಜಗದೀಶ್‌, ಪಿ.ಡಿ. ಮಂಜಪ್ಪ, ಡಿ.ಎಚ್‌. ರಾಮಚಂದ್ರಪ, ಸಿ. ಚಂದ್ರಪ್ಪ, ರುದ್ರೇಶ್‌, ಪಂಚಾಕ್ಷರಪ್ಪ, ಶಿವಮೂರ್ತಪ್ಪ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next