ಬೆಂಗಳೂರು: ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಅವರ ಬೆಂಬಲಿಗರು ನಗರದ ಪುರಭವನದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ರೆಡ್ಡಿ ಜನಸಂಘ, ರೆಡ್ಡಿ ಯುವ ಘಟಕ ಮತ್ತು ರಾಮಲಿಂಗಾರೆಡ್ಡಿ ಅಭಿಮಾನಿ ಬಳಗದ ಸುಮಾರು 200ಕ್ಕೂ ಅಧಿಕ ಬೆಂಬಲಿಗರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ರೆಡ್ಡಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಲು ಉಪಮುಖ್ಯಮಂತ್ರಿ ಡಾ ಜಿ.ಪರಮೇಶ್ವರ್ ಕಾರಣ ಎಂದು ಆಕ್ರೋಶವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರೆಡ್ಡಿ ಜನಸಂಘದ ಕಾರ್ಯದರ್ಶಿ ಶೇಖರ್ ರೆಡ್ಡಿ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ರೆಡ್ಡಿ ಸಮುದಾಯವನ್ನು ಕಡೆಗಣಿಸಲಾಗಿದೆ. ರಾಜ್ಯಾದ್ಯಂತ 50 ಲಕ್ಷ ಮಂದಿ ಇರುವ ಸಮುದಾಯಕ್ಕೆ ಒಂದೂ ಸಚಿವ ಸ್ಥಾನ ನೀಡಿಲ್ಲ.
ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಬೆಂಗಳೂರಿನಲ್ಲಿರುವ ಸಂಘದ 35 ಸಾವಿರ ಸದಸ್ಯರು ಪ್ರತಿ ಹಳ್ಳಿ, ತಾಲೂಕು, ಜಿಲ್ಲೆಯಲ್ಲಿರುವ ರೆಡ್ಡಿ ಸಂಘಗಳು ಬೀದಿಗಿಳಿದು ಹೋರಾಟ ನಡೆಸಲಿವೆ ಎಂದು ಎಚ್ಚರಿಕೆ ನೀಡಿದರು.
ಇಂದು ಸಂಜೆ ಡಿಸಿಎಂ ಸಭೆ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಭಾನುವಾರ ಕಾಂಗ್ರೆಸ್ ಸಂಸದರು ಹಾಗೂ ರಾಜ್ಯಸಭಾ ಸದಸ್ಯರ ಸಭೆ ಕರೆದಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಯಲಿದ್ದು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲಿದ್ದಾರೆ.
ಇದರೊಂದಿಗೆ ಸಚಿವ ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್‌ನಲ್ಲಿ ಉದ್ಭವಿಸಿರುವ ಬಿಕ್ಕಟ್ಟು ನಿವಾರಿಸಿ, ಸಮ್ಮಿಶ್ರ ಸರ್ಕಾರ ಸುಗಮವಾಗಿ ನಡೆಸುವ ಸಂಬಂಧ ಕೆಲವೊಂದು ಸಲಹೆ ಪಡೆಯಲಿದ್ದಾರೆ ಎಂದು ಡಿಸಿಎಂ ಕಚೇರಿ ಮೂಲಗಳು ತಿಳಿಸಿವೆ.