ರಾಯಚೂರು: ಶಾಲಾ, ಕಾಲೇಜುಗಳು ಆರಂಭಗೊಂಡಿದ್ದು, ಗ್ರಾಮೀಣ ಭಾಗಕ್ಕೆ ಬಸ್ ಸಂಚಾರ ಆರಂಭಿಸಿ, ಬಸ್ ಪಾಸ್ ವಿತರಿಸುವಂತೆ ಆಗ್ರಹಿಸಿ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ಎದುರು ಪ್ರತಿಭಟಿಸಿದರು. ಈ ಕುರಿತು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿ ಕಾರಿಗೆ ಮನವಿ ಸಲ್ಲಿಸಿ, ಲಾಕ್‌ಡೌನ್ ಕಾರಣಕ್ಕೆ ಕಳೆದ ಹಲವು ತಿಂಗಳಿಂದ ಸ್ಥಗಿತಗೊಂಡಿದ್ದ ಶಾಲಾ, ಕಾಲೇಜುಗಳನ್ನು ಸರ್ಕಾರ ಪುನಾರಂಭಿಸಿದೆ.
ಆದರೆ, ಹಳ್ಳಿಗಳಿಂದ ನಗರ, ಪಟ್ಟಣಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ ಗಳು ಸಮರ್ಪಕ ಸಿಗದ ಕಾರಣ ಸಮಸ್ಯೆಯಾಗುತ್ತಿದೆ. ಹೀಗಾಗಿ ಹಿಂದಿನಂತೆ
ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಜ.31ರವರೆಗೆ ಸಾರಿಗೆ ಇಲಾಖೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿತ್ತು. 10 ತಿಂಗಳಿಗೆ ಪಾವತಿಸಬೇಕಾದ ಶುಲ್ಕದಲ್ಲಿ ಕೇವಲ 5 ರಿಂದ 7 ತಿಂಗಳಿಗೆ ಪಡೆದು ಪಾಸ್ ನೀಡುವುದು ಸರಿಯಲ್ಲ. ಗ್ರಾಮೀಣ ಭಾಗದಿಂದ ಬರುವ ಮಕ್ಕಳು ಬಹುತೇಕ ಬಡತನದ ಹಿನ್ನೆಲೆ ಹೊಂದಿದ್ದು, ಕೊರೊನಾ ವೇಳೆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿವೆ. ಹೀಗಾಗಿ ಸರ್ಕಾರ ಈ ಬಗ್ಗೆ ಪರಿಶೀಲಿಸಿ ಬಸ್ ಪಾಸ್ ವಿತರಣೆಯಲ್ಲಿ ರಿಯಾಯಿತಿ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಜೆ.ಮೀರಾಪುರ, ಚಂದ್ರಬಂಡಾ, ಮರ್ಚೆಟಹಾಳ್, ರಾಮದುರ್ಗ, ಡಿ.ರಾಂಪುರ, ಗುಂಜಳ್ಳಿ, ಕನ್ಯಾದೊಡ್ಡಿ, ಗುಡದಿನ್ನಿ ಲಿಂಗನಕಾನದೊಡ್ಡಿ, ಗುಂಡ್ರವೇಲಿ ಸೇರಿ ವಿವಿಧ ಹಳ್ಳಿಗಳಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಎಐಡಿಎಸ್‌ಒ ಸಂಘಟನೆ ಜಿಲ್ಲಾಧ್ಯಕ್ಷ ಮಹೇಶ ಚೀಕಲಪರ್ವಿ ಸೇರಿದಂತೆ ದ್ಯಾರ್ಥಿಗಳು
ಪಾಲ್ಗೊಂಡಿದ್ದರು.