ಕೊಪ್ಪಳ: ಜಿಲ್ಲಾ ನ್ಯಾಯಾಲಯದಲ್ಲಿನ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಕಾರ್ಯಾಲಯ ಹಾಗೂ ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಕಾರ್ಯಾಲಯಕ್ಕೆ ಸಹಾಯಕ ಅಭಿಯೋಜಕರನ್ನು ನೇಮಿಸಬೇಕೆಂದು ಒತ್ತಾಯಿಸಿ ಜಿಲ್ಲಾ ವಕೀಲರ ಸಂಘದಿಂದ ಶುಕ್ರವಾರ ನಗರದ ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ಕಾರ್ಯಾಲಯದಿಂದ ಸಹಾಯಕ ಅಭಿಯೋಜಕರು ವರ್ಗಾವಣೆಗೊಂಡು ಸುಮಾರು ಎರಡು ವರ್ಷ ಗತಿಸಿವೆ. ಆದರೆ ಇದುವರೆಗೂ ಪೂರ್ಣ ಪ್ರಮಾಣದ ಅಭಿಯೋಜಕರನ್ನು ನೇಮಕ ಮಾಡಿಲ್ಲ. ಇದರಿಂದ ತೊಂದರೆಯಾಗುತ್ತಿದೆ ಎಂದು ವಕೀಲರು ತಮ್ಮ ಸಮಸ್ಯೆ ವ್ಯಕ್ತಪಡಿಸಿದರು.
ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಸುಮಾರು 4 ಸಾವಿರ ಪ್ರಕರಣಗಳು ಚಾಲ್ತಿಯಲ್ಲಿದ್ದು, 2500ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಇದರಿಂದ ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿದ್ದು, ಕಕ್ಷಿದಾರರಿಗೂ ತೊಂದರೆಯಾಗುತ್ತಿದೆ. ಈ ವಿಷಯ ಈಗಾಗಲೇ ಸರ್ಕಾರದ ವ್ಯಾಜ್ಯ ಮತ್ತು ಅಭಿಯೋಜನಾ ಇಲಾಖೆ, ಕಲಬುರಗಿ ಕಾನೂನು ಹಿರಿಯ ಅಧಿಕಾರಿಗಳಿಗೆ ಮೌಖೀಕ ಹಾಗೂ ಲಿಖಿತವಾಗಿ ಹಲವು ಬಾರಿ ಮನವಿ ಮಾಡಲಾಗಿದೆ. ಈವರೆಗೂ ಹೆಚ್ಚುವರಿ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ಕಾರ್ಯಾಲಯಕ್ಕೆ ಸಹಾಯಕ ಅಭಿಯೋಜಕರನ್ನು ನೇಮಕ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ರೀತಿ ವಿಳಂಬವಾದರೆ ಕಕ್ಷಿದಾರರು ಸೇರಿದಂತೆ ವಕೀಲರಿಗೂ ತುಂಬ ತೊಂದರೆಯಾಗಲಿದೆ. ಪ್ರಕರಣ ವಿಲೇವಾರಿ ಮಾಡಲು ಕಷ್ಟವಾಗಲಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೂಡಲೇ ನ್ಯಾಯಾಲಯಕ್ಕೆ ಸಹಾಯಕ ಅಭಿಯೋಜಕರನ್ನು ನೇಮಕ ಮಾಡಿ ಪ್ರಕರಣಗಳ ವಿಚಾರಣೆಗೆ ಸ್ಪಂದಿಸಬೇಕೆಂದು ಒತ್ತಾಯಿಸಿ ಜಿಲ್ಲಾ ವಕೀಲರ ಸಂಘವು ಶುಕ್ರವಾರ ಕೋರ್ಟ್ ಕಲಾಪದಿಂದ ದೂರ ಉಳಿದು, ನಗರದ ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿತು. ಈ ವೇಳೆ ವಕೀಲರ ಸಂಘದ ಜಿಲ್ಲಾಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ, ಹಿರಿಯ ನ್ಯಾಯವಾದಿ ಆರ್.ಬಿ. ಪಾನಘಂಟಿ, ವಿ.ಎಂ. ಭೂಸನೂರಮಠ, ಪೀರಾಹುಸೇನ ಹೊಸಳ್ಳಿ, ಹನುಮಂತರಾವ್ ಸೇರಿದಂತೆ ಇತರರು ಇದ್ದರು.