ಗದಗ: ವಿನಾಕಾರಣ ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಪಂ ಅಧ್ಯಕ್ಷರ ವಿರುದ್ಧ ಅಕ್ರಮ ಮರಳು ಸಂಗ್ರಹಿಸಿದ ಬಗ್ಗೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿ ಮುಂಡರಗಿ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ನೇತೃತ್ವದಲ್ಲಿ ಗ್ರಾಮದ ನೂರಾರು ಜನರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಗ್ರಾಮಸ್ಥರು, ಮುಂಡರಗಿ ತಹಶೀಲ್ದಾರ್, ಖನಿಜ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಘೊಷಣೆ ಕೂಗಿದರು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಮುಂಡರಗಿ ತಾಲೂಕಿನ ಶಿಂಗಟಾಲೂರ ಗ್ರಾ.ಪಂ. ವ್ಯಾಪ್ತಿಯ ಶೀರನಹಳ್ಳಿ ಗ್ರಾಮದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ ಪಕ್ಕದ ಖಾಲಿ ಜಮೀನಿನಲ್ಲಿ ಜಮೀನಿನ ಮಾಲೀಕರು ಸ್ವಂತಕ್ಕಾಗಿ ಮರಳು ಸಂಗ್ರಹಿಸಿದ್ದಾರೆ. ಆದರೆ, ಈ ಕುರಿತು ಪೂರ್ವಪರ ವಿಚಾರಿಸದೇ ಅಧಿಕಾರಿಗಳು ಶಾಲಾ ಆವರಣದಲ್ಲಿ ಮರಳು ಸಂಗ್ರಹಿಸಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವುದು ಖಂಡನೀಯ ಎಂದರು.
ದೂರು ದಾಖಲಿಸುವ ಮುನ್ನ ಸೌಜನ್ಯಕ್ಕೂ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರನ್ನೂ ವಿಚಾರಣೆಗೆ ಒಳಪಡಿಸಿಲ್ಲ. ತಹಶೀಲ್ದಾರ್, ಖನಿಜ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಏಕಪಕ್ಷೀಯವಾಗಿ ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು. ಯಾವುದೋ ಒತ್ತಡಕ್ಕೆ ಮಣಿದು ಹೋರಾಟಗಾರರ ವಿರುದ್ಧವೇ ಪ್ರಕರಣ ದಾಖಲಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿದ ಪ್ರತಿಭಟನಾಕಾರರು, ಈ ಕುರಿತು ಲೋಕಾಯುಕ್ತರು, ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಆಗ್ರಹಿಸಿದರು.
ಮುಂಡರಗಿ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ, ಶಿಂಗಟಾಲೂರು ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಮುಂಡವಾಡ, ತಾ.ಪಂ. ಅಧ್ಯಕ್ಷ ರುದ್ರಗೌಡ ಪಾಟೀಲ, ಯಲಪ್ಪ ಕುಕನೂರ, ದಂಡೆಪ್ಪ ಹರಿಜನ, ಎಸ್.ಎಸ್. ಹರಿಜನ, ನಾಗರಾಜ ಹೊಸಮನಿ, ಈರಣ್ಣ ಮುಂಡವಾಡ, ರುದ್ರಪ್ಪ ಮಲ್ಲಕೇರಿ ಸೇರಿದಂತೆ ಅನೇಕರು ಇದ್ದರು.