ಅಫಜಲಪುರ: ತಾಲೂಕಿನ ರೇಣುಕಾ ಸಕ್ಕರೆ ಕಾರ್ಖಾನೆಯವರು ಕಬ್ಬಿನ ಬಾಕಿ ಹಣ ಪಾವತಿ ಮಾಡುತಿಲ್ಲ ಎಂದು ಕಾರ್ಖಾನೆ ಎದುರು ರೈತರು ಪ್ರತಿಭಟನೆ ಮಾಡುವ ವೇಳೆ ಬಾಕಿ ಹಣ ಪಾವತಿಗಾಗಿ ಆಗ್ರಹಿಸಿ ರೈತನೊಬ್ಬ ವಿಷ ಸೇವನೆಗೆ ಮುಂದಾದ ಘಟನೆ ನಡೆಯಿತು.
ತಾಲೂಕಿನ ಹವಳಗಾದಲ್ಲಿರುವ ರೇಣುಕಾ ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬಿನ ಬಾಕಿ ಒಂಭತ್ತು ತಿಂಗಳು ಕಳೆದರೂ ರೈತರ ಖಾತೆಗೆ ಹಾಕದ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತಿರುವಾಗ ರೈತ ಮಲ್ಲು ಬಳೂರ್ಗಿ ಎನ್ನುವರು ವಿಷ ಸೇವನೆಗೆ ಮುಂದಾದರು. ಕೂಡಲೇ ಉಳಿದ ಪ್ರತಿಭಟನಾಕಾರರು ಈ
ಕೃತ್ಯವನ್ನು ತಡೆದರು.
ನಂತರ ಪ್ರತಿಭಟನೆಯನ್ನು ಉದ್ದೇಶಿಸಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ ಮಾತನಾಡಿ, ಕಾರ್ಖಾನೆಯವರು ತಾಲೂಕಿನ ರೈತರ ಕಬ್ಬನ್ನು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿರುವುದಲ್ಲದೇ ಹಣ ಪಾವತಿ ಮಾಡುವಲ್ಲಿಯೂ ವಿಳಂಬ ಮಾಡುತ್ತಿದ್ದಾರೆ. ಇದರಿಂದ ರೈತರ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಸಾಲ ಮಾಡಿ ಸಂಸಾರ ಮಾಡುತ್ತಿದ್ದಾರೆ. ಸಾಲ ಮರುಪಾವತಿ ಮಾಡಲಾಗದ ಪರಿಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಷ್ಟೆಲ್ಲ ಕಷ್ಟದಲ್ಲಿರುವ ರೈತರಿಗೆ ಕಾರ್ಖಾನೆಯವರು ದಾನ ನೀಡುವುದಿಲ್ಲ. ಕಬ್ಬು ಖರೀದಿಸಿ ಅವರಿಗೆ ಸಿಗಬೇಕಾದ ಹಣ ಪಾವತಿ ಮಾಡುವಲ್ಲಿ ವಿಳಂಬ ಮಾಡುವುದು ಸರಿಯಲ್ಲ ಎಂದರು.
ರೈತರನ್ನುದ್ದೇಶಿಸಿ ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿ ಬಿ.ಪಿ. ಹೂಗಾರ ಮಾತನಾಡಿ, ರೈತರು ಆತ್ಮಹತ್ಯೆಗೆ ಯತ್ನಿಸುವುದು ಬೇಡ, ಆದಷ್ಟು ಬೇಗ ಬಾಕಿ ಹಣವನ್ನು ರೈತರ ಖಾತೆಗೆ ಪಾವತಿಸಲಾಗುತ್ತದೆ ಎಂದು ಭರವಸೆ ನೀಡಿದ ಮೇಲೆ ರೈತರು ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು. ರೈತ ಮುಖಂಡರಾದ ಭೀಮರಾಯಗೌಡ ಪಾಟೀಲ, ಭಾಗಣ್ಣ ಕುಂಬಾರ, ಮಲ್ಲು ಬಳೂರ್ಗಿ, ರಾಜು ಉಂಡಿ, ಲಗಮಣ್ಣ ಪೂಜಾರಿ, ಕಾಂತು ಪಾಟೀಲ, ನಿಂಗಣ್ಣ ಕೆರಮಗಿ, ಪರೇಪ್ಪ ಬಳೂರ್ಗಿ ಇತರರು ಈ ಸಂದರ್ಭದಲ್ಲಿದ್ದರು.