ಚನ್ನಪಟ್ಟಣ: ರಸ್ತೆ ಬದಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿ ರಸ್ತೆಬದಿ ವ್ಯಾಪಾರಿಗಳು ಎಂ.ಜಿ.ರಸ್ತೆ ಜಗದೀಶ್‌ಬುದ್ಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ 15-20 ವರ್ಷಗಳಿಂದ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದು, ಅದನ್ನೆ ನಂಬಿ ಬದುಕುತ್ತಿದ್ದೇವೆ. ರಸ್ತೆ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ್ದರಿಂದ ನಮ್ಮ ಬದುಕು ಅತಂತ್ರವಾಗಿದೆ. ಅಲ್ಲದೆ, ಹಣ್ಣು, ತರಕಾರಿ, ಸೊಪ್ಪು ಮಾರಾಟ ಮಾಡುವ ತಳ್ಳುಗಾಡಿಗಳ ವ್ಯಾಪಾರಿಗಳಿಂದ ತೂಕದ ತಕ್ಕಡಿ, ಬಟ್ಟಗಳನ್ನು ಕಿತ್ತುಕೊಂಡು ದೌರ್ಜನ್ಯ ಎಸಗುತ್ತಿದ್ದಾರೆ. ನಾವೂ ಸಂಪೂರ್ಣವಾಗಿ ಸಂಕಷ್ಟದಲ್ಲಿ ಸಿಲುಕಿದ್ದು, ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲನ್ನು ತೋಡಿಕೊಂಡರು.
ವ್ಯಾಪಾರಿಗಳು ಕಡುಬಡವರು: ರಸ್ತೆಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ರಸ್ತೆ ಬದಿ ವ್ಯಾಪಾರಿಗಳು ಕಡುಬಡವರು. ಅದನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಅವರು ಸಾಲ ಮಾಡಿಕೊಂಡು ಮಾರಾಟ ಮಾಡಿಕೊಂಡು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಪೊಲೀಸರ ಸಹಕಾರ ಪಡೆದುಕೊಂಡು ಸ್ವಚ್ಛತೆ ಹೆಸರಿನಲ್ಲಿ ರಸ್ತೆ ಬದಿ ವ್ಯಾಪಾರ ಮತ್ತು ತಳ್ಳುಗಾಡಿ ವ್ಯಾಪಾರಿಗಳನ್ನು ತೆರವುಗೊಳಿಸಿ, ಮಾರಾಟ ವಸ್ತುಗಳನ್ನು ನಾಶಪಡಿಸಿ ಕಿರಿಕುಳ ನೀಡುತ್ತಿದ್ದಾರೆ ಎಂದು ದೂರಿದರು.
ಸಿಎಂ ಮಾತಿಗೆ ಗೌರವವಿಲ್ಲ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು 250ಕ್ಕೂ ಹೆಚ್ಚು ರಸ್ತೆಬದಿ ವ್ಯಾಪಾರಿಗಳ ನಿಯೋಗ ಬೆಂಗಳೂರಿನಲ್ಲಿ ಭೇಟಿ ಮಾಡಿ, ನಮ್ಮ ಕಷ್ಟ, ಸಮಸ್ಯೆಯನ್ನು ತೋಡಿಕೊಂಡಾಗ, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿ ಕಳುಹಿಸಿದ್ದಾರೆ. ಆದರೆ, ನಗರಸಭೆ ಅಧಿಕಾರಿಗಳು ಮುಖ್ಯಮಂತ್ರಿಗಳ ಮಾತಿಗೆ ಗೌರವ ಕೊಡದೇ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಇದನ್ನೇ ನಂಬಿ ಬದುಕುತ್ತಿರುವ ನಾವುಗಳು, ದಿನದ ಸಾಲ, ವಾರದ ಕಂತಿನ ಸಾವಿರಾರು ರೂ. ಸಾಲ ಪಡೆದು ಸಾಲವನ್ನು ತೀರಿಸಲಾಗದೆ, ವ್ಯಾಪಾರವಿಲ್ಲದೇ ಕಂಗಲಾಗಿದ್ದೇವೆ. ನಮ್ಮ ಕುಂಟುಂಬ ಆಶ್ರಯವಿಲ್ಲದೇ ಬೀದಿಗೆ ಬಿದ್ದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಯೋಜನೆ ಅನುಷ್ಠಾನಗೊಳಿಸಿಲ್ಲ: ರಾಜ್ಯ ಸರ್ಕಾರ ರಸ್ತೆ ಬದಿ ವ್ಯಾಪಾರಿಗಳ ಬಗ್ಗೆ ಅನುಕಂಪ ತೋರಿ ಜೀವನೋಪಾಯಕ್ಕೆ 10 ಸಾವಿರ ರೂ.ಸಾಲ ಸೌಲಭ್ಯ ನೀಡುತ್ತಿದೆ. ಆದರೆ, ನಗರಸಭೆ ರಸ್ತೆ ಬದಿ ವ್ಯಾಪಾರಿ ಗಳನ್ನು ಗುರುತಿಸಿ ಚೀಟಿ ನೀಡಿದ್ದು, ಇಲ್ಲಿನ ಅಧಿಕಾ ರಿಗಳು ಯೋಜನೆಯನ್ನು ಅನುಷ್ಠಾನಗೊಳಿ ಸುತ್ತಿಲ್ಲ. ಸಿಎಂ ರಸ್ತೆಬದಿ ವ್ಯಾಪಾರಿಗಳ ಮೇಲೆ ಕರುಣೆ ತೋರಿ ರಸ್ತೆ ಬದಿ ವ್ಯಾಪಾರಕ್ಕೆ ಅನುವು ಕೊಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ನ್ಯಾಯಕ್ಕಾಗಿ ನಗರಸಭೆ ಕಚೇರಿ ಎದುರು ಅನಿರ್ದಿಷ್ಟ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ರಸ್ತೆಬದಿ ವ್ಯಾಪಾರಿಗಳು ಹಾಜರಿದ್ದರು.