ಮಹಾನಗರ: ರಾಷ್ಟ್ರೀಯ ಹೆದ್ದಾರಿ 169 ದುರಸ್ಥಿಗೆ ಮತ್ತು ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ನೇತೃತ್ವದಲ್ಲಿ ನಗರದ ಗುರುಪುರ ಸೇತುವೆಯ ಬಳಿ ಪ್ರತಿಭಟನೆ ಮತ್ತು ರಸ್ತೆ ತಡೆ ನಡೆಸಲಾಯಿತು.
20 ವರ್ಷಗಳಿಂದ ರಾ.ಹೆದ್ದಾರಿ 169 ಯಾವುದೇ ದುರಸ್ತಿ ಕಾಣಲಿಲ್ಲ. ರಾಜ್ಯ ಹೆದ್ದಾರಿ ಕಾಮಗಾರಿ ಮಾಡದೇ, 40 ಕಿಮೀ. ಉದ್ದದ ರಸ್ತೆಯಲ್ಲಿ ಸಂಚಾರ ಮಾಡುತ್ತಿರುವ ಜನರ ಜೀವಕ್ಕೆ ಅಪಾಯಕಾರಿ ಆಗಿದ್ದು, ಜನರ ಜೀವನದಲ್ಲಿ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದರು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು. ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಸ್ಥಳ ಕಳೆದುಕೊಂಡವರ ಬೇಡಿಕೆ ಈಡೇರಿಸಿ, ಅಗತ್ಯ ಪರಿಹಾರವನ್ನು ಒದಗಿಸಿ ಕೂಡಲೇ ಜಿಲ್ಲಾಡಳಿತದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ರಸ್ತೆ ಕಾಮಗಾರಿ ಪ್ರಾರಂಭಗೊಳ್ಳಲು ಹಸಿರು ನಿಶಾನೆ ತೋರಿಸಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಯೋಜನಾ ನಿರ್ದೇಶಕರ ಕಚೇರಿಯನ್ನು ಮೂಡಬಿದಿರೆಯಲ್ಲಿ ಸ್ಥಾಪಿಸಬೇಕು ಮತ್ತು ಜನಸಾಮಾನ್ಯರ ಸಮಸ್ಯೆಯನ್ನು ಆಲಿಸಬೇಕು. 94 ವರ್ಷಗಳ ಹಳೆಯದಾದ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು ಸಂಚಾರಕ್ಕೆ ಸುರಕ್ಷಿತ ಅಲ್ಲ ಎಂದು ತಿಳಿದಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಲಾಯಿತು. ಕೂಡಲೇ ಕಾಮಗಾರಿ ಪ್ರಾರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ಬಂದ್ ಮಾಡುವುದಾಗಿ ಸಂಸದರಿಗೆ ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಶಾಸಕ ಮೊಯ್ದಿನ್ ಬಾವಾ, ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ. ಇಬ್ರಾಹಿಂ, ಗುರುಪುರಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ತಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್, ಸೇರಿದಂತೆ ರಿಕ್ಷಾ, ಟೆಂಪೋ, ಬಸ್ಸು ಚಾಲಕರು, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.