Advertisement

ದಂಪತಿ ಕೊಲೆ ಪ್ರಕರಣ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

10:27 AM Jan 26, 2019 | Team Udayavani |

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಕಲ್ಲಿಗೌಡನದೊಡ್ಡಿ ಗ್ರಾಮದಲ್ಲಿ ಡಿ.14ರಂದು ಸಿದ್ದರಾಜು ಮತ್ತು ಸಾಕಮ್ಮ ಅವರ ಮರ್ಯಾದ ಹತ್ಯೆ ಪ್ರಕರಣ ಮತ್ತು ಇತರ ಕೊಲೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿ ಮತ್ತು ಕರ್ನಾಟಕ ಕ್ಷತ್ರಿ ಒಕ್ಕೂಟಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ನಗರದ ಐಜೂರು ವೃತ್ತದಿಂದ ಕಂದಾಯ ಭವನದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕನಕಪುರ ಪೊಲೀಸರು ಮತ್ತು ಜಿಲ್ಲಾ ಡಳಿತದ ವಿರುದ್ಧ ಹರಿಹಾಯ್ದರು. ಕಲ್ಲಿಗೌಡನದೊಡ್ಡಿ ಪ್ರಕರಣದ ತನಿಖೆ ನಡೆಸುವ ವಿಚಾರದಲ್ಲಿ ಪೊಲೀಸರು ವಿಫ‌ಲರಾಗಿದ್ದಾರೆ. ಇಬ್ಬರನ್ನು ಬಂಧಿಸಿ, ಉಳಿದ ಐವರನ್ನು 43 ದಿನಗಳಾದರೂ ಪೊಲೀಸರು ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೆಸಾರ್ಟ್‌ ರಾಜಕಾರಣಕ್ಕೆ ಆದ್ಯತೆ: ಚುನಾಯಿತ ಪ್ರತಿನಿಧಿಗಳು ರೆಸಾರ್ಟ್‌ ರಾಜಕಾರಣಕ್ಕೆ ಆದ್ಯತೆ ಕೊಡುತ್ತಿರುವುದರಿಂದ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಯುತ್ತಿಲ್ಲ. ಒಂದೆಡೆ ಆಡಳಿತದಲ್ಲಿರುವ ಪಕ್ಷಗಳು ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳಲು ಮಗ್ನರಾಗಿದ್ದಾರೆ. ಇನ್ನೊಂದೆಡೆ ವಿರೋಧ ಪಕ್ಷಗಳು ಸಹ ಅಧಿಕಾರದ ದುರಾಸೆಗೆ ವಾಮ ಮಾರ್ಗ ಅನುಸರಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ವ್ಯವಸ್ಥೆ ಯಶಸ್ವಿಯಾಗಿ ನಡೆಯಲು ಪ್ರಬಲ ವಿರೋಧ ಪಕ್ಷವಿದ್ದಾಗ ಮಾತ್ರ ಸಾಧ್ಯವಾಗುತ್ತದೆ, ಆದರೆ, ಕರ್ನಾಟಕದಲ್ಲಿ ಇದು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

5-6 ವರ್ಷಗಳಲ್ಲಿ 35ಕ್ಕೂ ಅಧಿಕ ಕೊಲೆ: ಕನಕಪುರ ತಾಲೂಕಿನಲ್ಲಿ ಕಳೆದ 5-6 ವರ್ಷಗಳಲ್ಲಿ 35ಕ್ಕೂ ಹೆಚ್ಚು ಕೊಲೆ ಪ್ರಕರಣಗಳು ನಡೆದಿದೆ. ಕೆಲವು ಯುವಕರು ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗಿ, ಘಾತುಕ ಕೃತ್ಯಯಲ್ಲಿ ಭಾಗಿಯಾಗುತ್ತಿದ್ದಾರೆ. ಸುಲಿಗೆ, ಕಳ್ಳತನದ ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ಇವುಗಳ ಕಡಿವಾಣಕ್ಕೆ ಕ್ರಮ ಕೈಗೊಂಡಿಲ್ಲ. ಕನಕಪುರ ತಾಲೂಕಿನಲ್ಲಿ ಒಂದೆರೆಡು ಸರ್ಕಾರಿ ಕಟ್ಟಡಗಳನ್ನು ಕಟ್ಟಿದ್ದೇ ಅಭಿವೃದ್ಧಿ, ಸಾಧನೆ, ಪ್ರಗತಿ ಎಂಬ ಭ್ರಮೆಯಲ್ಲಿ ಕೆಲವು ಚುನಾಯಿತ ಪ್ರತಿನಿಧಿಗಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾನ್ಯ ಜನರಿಗೆ ರಕ್ಷಣೆಯೇ ಇಲ್ಲ: ಸುದ್ದಿಗಾರರೊಂದಿಗೆ ರಾಜ್ಯ ಬಿಎಸ್‌ಪಿ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾತನಾಡಿ, ಕನಕಪುರ ತಾಲೂಕಿನಲ್ಲಿ ಸಾಮಾನ್ಯ ಜನರಿಗೆ ರಕ್ಷಣೆಯೇ ಇಲ್ಲ. ಅಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯಾಗುತ್ತಿಲ್ಲ. ಕೊಲೆ ಪಾತಕಿಗಳೊಂದಿಗೆ ಕೆಲವು ಪೊಲೀಸ್‌ ಅಧಿಕಾರಿಗಳಿದ್ದಾರೆ. ಪೊಲೀಸ್‌ ಠಾಣೆಗಳು ಬಡ್ಡಿ ವಸೂಲಿ ಕೇಂದ್ರಗಳಾಗಿವೆ ಎಂದು ಟೀಕಿಸಿದರು.

Advertisement

ಅಪರ ಜಿÇ್ಲಾಧಿಕಾರಿ ಡಾ.ಪ್ರಶಾಂತ್‌ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಬಿಎಸ್‌ಪಿ ರಾಜ್ಯಾಧ್ಯಕ್ಷ ಹರಿರಾಂ, ಉಪಾಧ್ಯಕ್ಷ ಮಾರಾಸಂದ್ರ ಮುನಿಯಪ್ಪ, ಅನ್ನದಾನಪ್ಪ, ಅರಕಲವಾಡಿ ನಾಗೇಂದ್ರ, ಮಾದೇಶ್‌ ಉಪ್ಪಾರ್‌ , ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್‌ ಸಿಂಗ್‌, ಪ್ರಮುಖರಾದ ಕೃಷ್ಣಪ್ಪ, ಎಂ.ನಾಗೇಶ್‌, ನೀಲಿ ರಮೇಶ್‌, ಪುಟ್ಟಮಾದಯ್ಯ, ಗುರುಮೂರ್ತಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next