Advertisement
ಜೋಡಣಿದಾರರ ಮಗ್ಗಗಳು ಬಂದಾಗಿರುವುದರಿಂದ ಅಂದಾಜು 15 ಸಾವಿರಕ್ಕೂ ಹೆಚ್ಚು ಜನ ಅವಲಂಬಿತರು ಎರಡು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜೋಡಣಿದಾರರ ನೇಕಾರರ ಮುಖಂಡರಾದ ಕುಬೇರ ಸಾರವಾಡ ಮತ್ತು ಕುಮಾರ ಬೀಳಗಿ ಹೇಳಿದರು. ಜೋಡಣಿದಾರ ನೇಕಾರರು ಮಜೂರಿ ಹೆಚ್ಚಳಕ್ಕಾಗಿ ಆಗ್ರಹಿಸಿ ಉಪ ತಹಶೀಲ್ದಾರ್ ಎಸ್. ಎಲ್.ಕಾಗಿಯವರ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
Related Articles
Advertisement
ಅದೇ ರೀತಿಯಾಗಿ ವಿದ್ಯುತ್ ದರ ಕೂಡಾ ಹೆಚ್ಚಾಗಿದೆ. ಒಂದು ಎಚ್.ಪಿ ಮೋಟಾರ್‌ಗೆ ಕನಿಷ್ಟ ದರವನ್ನು 25 ರೂ. ಇದ್ದ ಬೆಲೆಯನ್ನು 75 ರೂ.ಗೆ ಹೆಚ್ಚಳ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ನೀಡಿದ ರಿಯಾಯ್ತಿಯನ್ನು ವಿದ್ಯುತ್ ಇಲಾಖೆಯವರು ಈಗ ಮರಳಿ ಪಡೆದುಕೊಳ್ಳುತ್ತಿದ್ದಾರೆ. ಇದು ಭಾರಿ ಹೊಣೆಯಾಗಿದೆ. ಮಾರುಕಟ್ಟೆಯಲ್ಲಿ ಮಗ್ಗದ ಬಿಡಿ ಭಾಗಗಳು ದುಬಾರಿಯಾಗಿವೆ. ಇದರಿಂದಾಗಿ ಮಗ್ಗಗಳ ನಿರ್ವಹಣೆ ಕೂಡಾ ಸಮಸ್ಯೆಯಾಗಿದೆ ಎನ್ನುತ್ತಾರೆ ಜೋಡಣಿದಾರರು.
ಆದ್ದರಿಂದ ಜೋಡಣಿದಾರ ನೇಕಾರಿಕೆ ಅವಲಂಬಿಸಿದ ಕುಟುಂಬಗಳು ಎರಡು ಹೊತ್ತಿನ ಊಟ ಮಾಡಬೇಕಾದರೆ 9 ರೂ. ಮಜೂರಿ ಹೆಚ್ಚಳವಾಗಬೇಕಾಗಿದೆ ಎಂದು ಮುಖಂಡರಾದ ಬಸವರಾಜ ಮುರಗೋಡ, ಪರಮಾನಂದ ಭಾವಿಕಟ್ಟಿ,ಮಹಾದೇವ ನುಚ್ಚಿ, ಬಾಗಪ್ಪ ಬಾಣಕಾರ, ನಾಮದೇವ ಮಾನೆ, ರಮೇಶ ಸುಪ್ತಾನಪುರ ಸೇರಿದಂತೆ ನೂರಾರು ನೇಕಾರರು ಆಗ್ರಹಿಸಿದರು. ಬನಹಟ್ಟಿಯಲ್ಲಿ ಜೋಡಣಿದಾರ ನೇಕಾರರು ಮಜೂರಿ ಹೆಚ್ಚಳಕ್ಕಾಗಿ ಆಗ್ರಹಿಸಿ ಉಪ ತಹಶೀಲ್ದಾರ್ ಎಸ್.ಎಲ್.ಕಾಗಿಯವರ ಅವರಿಗೆ ಮನವಿ ಸಲ್ಲಿಸಿದರು.
ನೇಕಾರ ಮಾಲೀಕರ ಮುಖಂಡರಾದ ಶಂಕರ ಜಾಲಿಗಿಡದ ಮಾತನಾಡಿ, ಈಗಾಗಲೇ ನಾವು 4.50 ರೂ. ಹೆಚ್ಚಳ ಮಾಡುತ್ತೇವೆ ಎಂದು ಹೇಳಿದ್ದೇವೆ. ಇದಕ್ಕೆ ಸ್ಪಂದಿಸಿದ ಕೆಲವು ನೇಕಾರರು ಉದ್ಯೋಗದಲ್ಲಿ ತೊಡಗಿದ್ದಾರೆ. ನೇಕಾರ ಮಾಲೀಕರ ಮುಖಂಡರಿಗೂ ಸಾಕಷ್ಟು ಸಮಸ್ಯೆಗಳಿವೆ. ನೇಕಾರಿಕೆಯ ಉದ್ಯೋಗಕ್ಕೆ ಬೇಕಾದ ಕಚ್ಚಾ ನೂಲು, ಬಣ್ಣ, ಝರಿ, ಚಮಕಾ ಜೊತೆಗೆ ಜಿಎಸ್ಟಿ ಏರಿಕೆಯಿಂದಾಗಿ ನಮಗೂ ಕೂಡಾ ಹೊರೆಯಾಗಿದೆ. ಇವೆಲ್ಲವುಗಳಿಂದ ಮುಖ್ಯವಾಗಿ ನಮ್ಮ ಸೀರೆಗಳಿಗೆ ಮಾರುಕಟ್ಟೆಯೂ ಕೂಡಾ ಕಡಿಮೆಯಾಗುತ್ತಿದೆ. ನಾವು ನೇಕಾರರಿಗೂ ಮುಂಗಡ ಹಣ ನೀಡಬೇಕಾಗಿದೆ. ಜೊತೆಗೆ ಸೀರೆ ಖರೀದಿ ಮಾಡಿದವರಿಗೂ ಕೂಡಾ ಉದ್ರಿ ನೀಡಬೇಕಾಗಿದೆ. ಆದ್ದರಿಂದ ನಾವು 4.50 ರೂ. ಕೊಡಲು ಸಂಪೂರ್ಣ ಒಪ್ಪಿದ್ದೇವೆ ಎಂದರು.