ದಾಂಡೇಲಿ : ವೇತನ ಪರಿಷ್ಕರಣೆ ಒಪ್ಪಂದಕ್ಕೆ ಆಗ್ರಹಿಸಿ ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಕಾರ್ಮಿಕರು ಇದೇ ಮೊದಲ ಬಾರಿಗೆ ಕಾರ್ಖಾನೆಯ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ವೇತನ ಪರಿಷ್ಕರಣೆ ಒಪ್ಪಂದಕ್ಕಾಗಿ ಕಳೆದ 33 ತಿಂಗಳುಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದೇವೆ. ಆದರೆ ಕಾರ್ಖಾನೆಯ ಆಡಳಿತ ಮಂಡಳಿ ಕುಂಟು ನೆಪ ಹೇಳಿ ವೇತನ ಪರಿಷ್ಕರಣೆಗೆ ಕಾಲಹರಣ ಮಾಡುತ್ತಿದೆ. ನ್ಯಾಯೋಚಿತ ಹಾಗೂ ಅರ್ಹ ರೀತಿಯಲ್ಲಿ ವೇತನ ಪರಿಷ್ಕರಣೆಯಾಗಬೇಕೆಂದು ಆಗ್ರಹಿಸಿ ಕಾರ್ಮಿಕರೇ ಸ್ವಯಂ ನೇತೃತ್ವ ವಹಿಸಿ ಪ್ರತಿಭಟನೆಗೆ ಇಳಿದಿದ್ದಾರೆ.
ದೈನಂದಿನ ಪಾಳಿ ಪ್ರಕಾರ ಕೆಲಸ ಮುಗಿಸಿ ಹೊರಬಂದ ಕಾರ್ಮಿಕರು ಕಾರ್ಖಾನೆಯ ಮುಖ್ಯ ಗೇಟಿನಿಂದ ಹೊರಬಂದು ಕೇಂದ್ರ ಕಚೇರಿಯವರೆಗೆ ಮೆರವಣಿಗೆಯ ಮೂಲಕ ಸಾಗಿ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಜೊತೆ ಸಭೆ ನಡೆಸಿ ಪ್ರತಿಭಟನಾಕಾರರಲ್ಲಿಗೆ ಬಂದ ಜಂಟಿ ಸಂಧಾನ ಸಮಿತಿಯ ಸದಸ್ಯರುಗಳಾದ ಸಿ.ವಿ.ಲೋಕೇಶ, ಉದಯ ನಾಯ್ಕ, ಬಿ.ಡಿ.ಹಿರೇಮಠ ಮತ್ತು ಶ್ರೀನಿವಾಸ ಘೋಟ್ನೇಕರ ಅವರು, ಕಾರ್ಖಾನೆಯ ಆಡಳಿತ ಮಂಡಳಿ ರೂ:3300/- ರಂತೆ ವೇತನ ಪರಿಷ್ಕರಣೆ ಮಾಡಲಾಗುವುದು ಎಂದಿದೆ. ಆದರೆ, ನಾವದಕ್ಕೆ ಒಪ್ಪಿಲ್ಲ. ನಮ್ಮ ಬೇಡಿಕೆಯಾನುಸಾರವಾಗಿ ವೇತನ ಪರಿಷ್ಕರಣೆಯಾಗಬೇಕೆಂದು ಒತ್ತಾಯಿಸಿ ಹೊರಬಂದಿದ್ದೇವೆ. ಈ ಬಗ್ಗೆ ನಾಳೆಯೆ ಜಂಟಿ ಸಂಧಾನ ಸಮಿತಿಯ ಸದಸ್ಯರೆಲ್ಲರೂ ಬೆಳಗಾವಿಯಲ್ಲಿರುವ ಉಪ ಕಾರ್ಮಿಕ ಆಯುಕ್ತರ ಬಳಿ ಹೋಗಿ ಚರ್ಚೆ ನಡೆಸಿ, ನ್ಯಾಯೋಚಿತವಾಗಿ ವೇತನ ಒಪ್ಪಂದ ಪರಿಷ್ಕರಣೆಯನ್ನು ಮಾಡಲು ಕಾಗದ ಕಾರ್ಖಾನೆಯ ಆಡಳಿತ ಮಂಡಳಿಗೆ ಕಾನೂನಾತ್ಮಕವಾಗಿ ನಿರ್ದೇಶಿಸಬೇಕೆಂದು ಒತ್ತಾಯಿಸುತ್ತೇವೆ ಎಂದರು.
ಜಂಟಿ ಸಂಧಾನ ಸಮಿತಿಯ ಸದಸ್ಯರುಗಳ ಮಾತಿನ ನಂತರವೂ ಕಾರ್ಮಿಕರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿಯೂ ಜೀವಭಯ ಬಿಟ್ಟು ಕೆಲಸ ನಿರ್ವಹಿಸಿದ್ದೇವೆ. ಕಾರ್ಖಾನೆ ಲಾಭದಲ್ಲಿದೆ. ಬೇಡದಿರುವುದಕ್ಕೆ ಬೇಕಾದಷ್ಟು ಖರ್ಚು ಮಾಡುತ್ತದೆ. ಆದರೆ ಕಾರ್ಖಾನೆಗಾಗಿ ಜೀವದಂಡಿಸುವ ಕಾರ್ಮಿಕರಿಗೆ ಕಡಿಮೆ ವೇತನ ನೀಡಿ ದುಡಿಸಿಕೊಳ್ಳಲಾಗುತ್ತದೆ. ನಮ್ಮ ಶ್ರಮಕ್ಕೆ ತಕ್ಕ ವೇತನ ಕೊಡಲೆಬೇಕು. ಬೇಡಿಕೆಯಂತೆ ವೇತನ ಪರಿಷ್ಕರಣೆಯಾಗಬೇಕೆಂದು ಪಟ್ಟು ಹಿಡಿದು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರ ಹಾಗೂ ಗ್ರಾಮೀಣ ಠಾಣೆಯ ಪಿಎಸೈಗಳು, ಪೊಲೀಸರು ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದು, ಮುಂಜಾಗೃತೆ ವಹಿಸಿದ್ದಾರೆ.