ಲಕ್ಷ್ಮೇಶ್ವರ: ತಾಲೂಕಿನ ಗೊಜನೂರ ಗ್ರಾಮದಲ್ಲಿ ಎಂ ಸ್ಯಾಂಡ್ ಸಾಗಿಸುವ ಟಿಪ್ಪರ್ ಎತ್ತಿನ ಚಕ್ಕಡಿಗೆ ಡಿಕ್ಕಿ ಹೊಡೆದಿದ್ದು, ಎತ್ತು ಮತ್ತು ರೈತ ಗಾಯಗೊಂಡ ಘಟನೆ ಖಂಡಿಸಿ ಶುಕ್ರವಾರ ಗ್ರಾಮಸ್ಥರು ಈ ಮಾರ್ಗವಾಗಿ ಸಂಚರಿಸುವ ಟಿಪ್ಪರ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಬೀರಪ್ಪ ಗುಡ್ಡಣ್ಣವರ ಎಂಬುವರು ಚಕ್ಕಡಿಯಲ್ಲಿ ತಾಯಿ, ಪತ್ನಿ, ಮಗಳು ಮತ್ತು ಒಬ್ಬ ಕೂಲಿಕಾರರನ್ನು ಕರೆದುಕೊಂಡು ಹೊಲಕ್ಕೆ ಹೋಗುತ್ತಿದ್ದರು. ಈ ವೇಳೆ ಯರ್ರಾಬಿರ್ರಿಯಾಗಿ ಬಂದ ಟಿಪ್ಪರ್ ಚಕ್ಕಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಕ್ಕಡಿಯಲ್ಲಿದ್ದವರು ಮುಗ್ಗರಿಸಿದ್ದು ಎತ್ತು ಮತ್ತು ರೈತನಿಗೆ ಗಾಯವಾಗಿದೆ. ಅದೃಷ್ಟವವಶಾತ್ ಚಕ್ಕಡಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ವೇಳೆ ಗ್ರಾಮಸ್ಥರು ಟಿಪ್ಪರ್ ತಡೆದು ಚಾಲಕನನ್ನು ಥಳಿಸಿದ್ದಾರೆ. ಒಂದು ಗಂಟೆ ಕಾಲ ಈ ಮಾರ್ಗವಾಗಿ ಸಂಚರಿಸುವ ಎಲ್ಲ ಲಾರಿ-ಟಿಪ್ಪರ್‌ಗಳನ್ನು ತಡೆದು ಆಕ್ರೋಶವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಸ್ಥಳಕ್ಕೆ ಆಗಮಿಸಿ ರೈತರನ್ನು ಸಮಾಧಾನ ಪಡಿಸಿ ಲಾರಿ ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ಇಂತಹ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿದ ರೈತ ಮುಖಂಡರಾದ ಮಹಾಂತಗೌಡ ಪಾಟೀಲ, ಚನ್ನಪ್ಪ ಷಣ್ಮುಕಿ, ವಿರೂಪಾಕ್ಷಗೌಡ ಪಾಟೀಲ, ನಿಂಗಪ್ಪ ಕಾಟಿ, ಕೇಶಪ್ಪ ಜಾಲಮ್ಮನವರ, ಬಸವರಾಜ ಜಾಲಮ್ಮನವರ, ಪ್ರಕಾಶ ಗುಡ್ಡಣ್ಣವರ ಅವರು ನಿತ್ಯ ಎಂ ಸ್ಯಾಂಡ್, ಖಡಿ, ಕಲ್ಲು, ಮರಳು ಸಾಗಿಸುವ ನೂರಾರು ಲಾರಿ, ಟಿಪ್ಪರ್‌ಗಳು ಹಗಲು-ರಾತ್ರಿ ನಿಯಮ ಮೀರಿ ಯರ್ರಾಬಿರ್ರಿ ಸಂಚರಿಸುತ್ತವೆ. ಟಿಪ್ಪರ್‌ಗಳ ಹಾವಳಿಗೆ ಗ್ರಾಮಸ್ಥರು ನಲುಗಿ ಹೋಗಿದ್ದಾರೆ.
ಅನೇಕ ಬಾರಿ ಅವಘಡಗಳು ಸಂಭವಿಸಿವೆ ಮತ್ತು ಅಂತಹ ಸಂದರ್ಭದಲ್ಲಿ ಗ್ರಾಮಸ್ಥರು ವಾಹನ ತಡೆದು ಎಚ್ಚರಿಕೆ ನೀಡಲಾಗಿದೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಲಾರಿ ಮಾಲಕ ಮತ್ತು ಚಾಲಕರು ನಿತ್ಯ ತಮ್ಮ ಕಾಯಕ ಮುಂದುವರಿಸುತ್ತಾರೆ. ತಾಲೂಕಿನಲ್ಲಿನ ರಸ್ತೆಗಳ ಸ್ಥಿತಿ ಸಂಪೂರ್ಣ ಹದಗೆಟ್ಟಿವೆ. ಸಂಬಂಧಪಟ್ಟ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿಯ ಅಪಘಾತ, ಅವಘಡ ಸಂಭವಿಸಿದರೆ ಗ್ರಾಮಸ್ಥರೆಲ್ಲ ಸೇರಿ ಈ ಮಾರ್ಗದಲ್ಲಿ ಲಾರಿ-ಟಿಪ್ಪರ್ ಸಂಚಾರ ಸಂಪೂರ್ಣ ಬಂದ್ ಮಾಡಲು ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.