ಪುತ್ತೂರು: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ರೈತರು, ಕೃಷಿ ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಕಸುಬುದಾರರ ಬೇಡಿಕೆಗಳನ್ನು ಸರಕಾರ ತತ್‌ಕ್ಷಣವೇ ಈಡೇರಿಸುವ ಕಾರ್ಯವಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸುರುಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ ಆಗ್ರಹಿಸಿದರು.
ಬುಧವಾರ ಪುತ್ತೂರಿನ ಮಿನಿ ವಿಧಾನ ಸೌಧದ ಎದುರು ರಾಜ್ಯ ರೈತಸಂಘ ಹಸುರು ಸೇನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪ್ರಧಾನಿ ಮೋದಿಯವರು ಮಾಡಿರುವ 20ಲಕ್ಷ ಕೋಟಿ ಘೋಷಣೆಯು ಕನ್ನಡಿಯೊಳಗಿನ ಗಂಟಾಗಿದ್ದು, ಇದರಿಂದ ರೈತರು, ಕಾರ್ಮಿಕರಿಗೆ ಯಾವುದೇ ಪ್ರಯೋಜನವಿಲ್ಲ. ಪ್ರಧಾನಿ ಸುಳ್ಳು ಹೇಳಬಾರದು ಎಂದರು. ಮುಂಗಾರು ಹಿನ್ನೆಲೆಯಲ್ಲಿ ರೈತ, ಕೂಲಿ ಕಾರ್ಮಿಕರಿಗೆ ಹೊಸ ಸಾಲ ಕೂಡಲೇ ನೀಡಬೇಕು. ಡಾ| ಸ್ವಾಮಿನಾಥನ್ ವರದಿಯಂತೆ ಎಲ್ಲ ಕೃಷಿ ಉತ್ಪನ್ನಗಳನ್ನು ಸರಕಾರ ಖರೀದಿ ಮಾಡಬೇಕು. ಬೆಳೆ ನಷ್ಟಕ್ಕೆ ಪೂರ್ಣ ಪರಿಹಾರ ನೀಡಬೇಕು ಎಂದು ವಿವಿಧ ಆಗ್ರಹಗಳನ್ನು ಮುಂದಿಟ್ಟರು.
ಪ್ರತಿಭಟನೆಯಲ್ಲಿ ರೈತ ಸಂಘ ಹಸುರು ಸೇನೆಯ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಜಿಲ್ಲಾ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ತುಂಬೆ, ಜಿಲ್ಲಾ ಉಪಾಧ್ಯಕ್ಷರಾದ ದಿವಾಕರ ಪೈ ಮಜಿಗುಂಡಿ, ಆಲ್ವಿನ್ ಮಿನೇಜಸ್ ಗಂಟಲ್‌ಕಟ್ಟೆ, ಶ್ರೀನಿವಾಸ ಗೌಡ ನಿಡಿಂಜಿ, ಕಾರ್ಮಿಕ ಮುಖಂಡ ನ್ಯಾಯವಾದಿ ಬಿ.ಎಂ. ಭಟ್ ಭಾಗವಹಿಸಿದ್ದರು.
ರೈತರಿಂದ ಒಂದು ವರ್ಷ ಸ್ವಯಂಪ್ರೇರಿತ ಲಾಕ್‌ಡೌನ್
ಸರಕಾರ ಲಾಕ್‌ಡೌನ್ ಅನ್ನು ಸಡಿಲ ಮಾಡಿದ್ದರೂ ರೈತರು-ಕೃಷಿಕ ವರ್ಗ ಮಾತ್ರ ಇನ್ನೂ ಒಂದು ವರ್ಷ ಸ್ವಯಂಪ್ರೇರಿತ ಲಾಕ್‌ಡೌನ್ ಮಾಡುತ್ತೇವೆ. ನಮ್ಮ ಮನೆಯ ಮದುವೆ ಮತ್ತಿತರ ಕಾರ್ಯಕ್ರಮಗಳನ್ನು ಹೆಚ್ಚು ಜನ ಸೇರಿಸದೆ ನಡೆಸಬೇಕು. ಕಾರ್ಯಕ್ರಮಗಳನ್ನು ಅತ್ಯಂತ ಸರಳವಾಗಿ ನಡೆಸುತ್ತೇವೆ ಎಂದು ಇಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ರೈತಸಂಘ ಹಸುರುಸೇನೆರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ ಹೇಳಿದರು.