Advertisement

ಬೆಳೆವಿಮೆಗಾಗಿ ಶಿರೂರು ಗ್ರಾಮಸ್ಥರಿಂದ ಪ್ರತಿಭಟನೆ

12:36 PM Sep 12, 2017 | Team Udayavani |

ಧಾರವಾಡ: 2016-17ನೇ ಸಾಲಿನ ಹಿಂಗಾರು ಬೆಳೆವಿಮೆಯನ್ನು ಕೂಡಲೇ ಬಿಡುಗಡೆ ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನವಲಗುಂದ ತಾಲೂಕಿನ ಶಿರೂರು ಗ್ರಾಮದ ರೈತರು ಶಾಸಕ ಎನ್‌.ಎಚ್‌. ಕೋನರಡ್ಡಿ ಹಾಗೂ ರೈತ ಮುಖಂಡ ಮಲ್ಲಿಕಾರ್ಜುನಗೌಡ ಬಾಳನಗೌಡ್ರ ನೇತೃತ್ವದಲ್ಲಿ ನಗರದ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ರಾಜ್ಯ ಸರ್ಕಾರ ಕೇವಲ ಸಹಕಾರ ಸಂಘಗಳಲ್ಲಿನ ರೈತರ ಸಾಲಮನ್ನಾ ಮಾಡಿ ಇಬ್ಬಗೆ ನೀತಿ ಅನುಸರಿಸುತ್ತಿದೆ. ಕೂಡಲೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು. 2016-17ನೇ ಸಾಲಿನ ಹಿಂಗಾರು ಬೆಳೆವಿಮೆ ಇನ್ನೂ ರೈತರ ಕೈ ಸೇರಿಲ್ಲ.

2017-18ನೇ ಸಾಲಿನ ಮುಂಗಾರು ಬೆಳೆವಿಮೆ ಕೂಡ ಇನ್ನೂ ಬಂದಿಲ್ಲ. ಸತತ ಮೂರು ವರ್ಷಗಳ ಕಾಲ ಬರದಿಂದ ತತ್ತರಿಸಿರುವ ರೈತರಿಗೆ ಇದೊಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೂಡಲೇ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ ನಲ್ಲಿರುವ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು ಹಾಗೂ ಕೇಂದ್ರ ಸರ್ಕಾರ ರೈತರಿಗೆ ಶೇ.1ರ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ಸಾಲಭ್ಯ ನೀಡಬೇಕು ಎಂದು ಆಗ್ರಹಿಸಿದರು. 

ಈ ವೇಳೆ ಮಾತನಾಡಿದ ಶಾಸಕ ಎನ್‌.ಎಚ್‌. ಕೋನರಡ್ಡಿ, ರಾಜ್ಯ ಸರ್ಕಾರ ಕೂಡಲೇ ರಾಷ್ಟ್ರೀಕೃತ ಬ್ಯಾಂಕ್‌ ಗಳಲ್ಲಿರುವ ರೈತರ ಸಾಲಮನ್ನಾ ಮಾಡಲು ಮುತುವರ್ಜಿ ವಹಿಸಬೇಕು. ಕೇಂದ್ರ ಸರ್ಕಾರವೂ ರೈತರ ಸಾಲವನ್ನು ಮನ್ನಾ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಬಳಿಕ ಡಿಸಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ರಾಚಯ್ಯ ಮಠದ ಸೇರಿದಂತೆ ಶಿರೂರ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next