Advertisement

Hunsur: ವಿವಿಧ ಬೇಡಿಕೆ ಈಡೇರಿಕೆಗಾಗಿ ಸಂಘಟನೆಗಳ ಪ್ರತಿಭಟನಾ ಧರಣಿ

02:39 PM Feb 17, 2024 | Team Udayavani |

ಹುಣಸೂರು: ದೇಶದ ರಾಜಧಾನಿ ದೆಹಲಿಗೆ ಹೊರಟ ರೈತರ ಮೇಲೆ ನಡೆದ ಅಮಾನುಷ ದೌರ್ಜನ್ಯ ಖಂಡಿಸಿ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಹಾಗೂ ಅಂಗನವಾಡಿ ಕಾರ್ಯಕರ್ತರ ಹಾಗೂ ರೈತ ಕೂಲಿಕಾರರ ಮತ್ತು ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನಾ ಧರಣಿ ನಡೆಸಿದರು.

Advertisement

ನಗರದ ಸಂವಿಧಾನ ಸರ್ಕಲ್‌ನಲ್ಲಿ ದಲಿತ ಹಕ್ಕುಗಳ ಸಮಿತಿ, ರಾಜ್ಯ ರೈತ ಸಂಘ, ನಗರ ಕಾರ್ಮಿಕರ ಸಂಘ, ಡಿಎಚ್‌ಎಸ್, ಡಿಎಸ್‌ಎಸ್ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳ ಕಾರ್ಯಕರ್ತರು ನಡೆಸಿದ ಪ್ರತಿಭಟನಾ  ಧರಣಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ, ಕಾರ್ಮಿಕ, ಕೂಲಿಕಾರರ ವಿರೋಧಿ ನೀತಿಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸಲು ಕ್ರಮವಹಿಸಬೇಕು ಎಂದ ಪ್ರತಿಭಟನಾಕಾರರು ಉದ್ಯೋಗ ಸೃಷ್ಟಿಸಲು ಆಗ್ರಹಿಸಿ ಘೋಷಣೆಗೆ ಕೂಗಿ ಗಮನ ಸೆಳೆದರು.

ಸಿಐಟಿಯು ತಾಲೂಕು ಸಂಚಾಲಕ ವಿ.ಬಸವರಾಜಕಲ್ಕುಣಿಕೆ ಮಾತನಾಡಿ, ದೇಶದಲ್ಲಿ ರೈತ ಕಾರ್ಮಿಕರ ಪರವಾಗಿ ನಿಲ್ಲಬೇಕಾದ ಸರಕಾರಗಳು ವಿರೋಧಿ ಧೋರಣೆಗಳನ್ನು ಅನುಸರಿಸಿ ಅವರ ಬದುಕನ್ನು ಕಿತ್ತುಕೊಳ್ಳಲು ಹೊರಟಿವೆ ಎಂದ ಅವರು, ರೈತರು ತಮ್ಮ ಬೇಡಿಕೆಗಳಿಗಾಗಿ ಒತ್ತಾಯಿಸಿ ದೇಶದ ರಾಜಧಾನಿ ದೆಹಲಿಗೆ ಹೊರಟ ರೈತರ ಮೇಲೆ ಕೇಂದ್ರ ಸರಕಾರ ಅಮಾನುಷವಾಗಿ ಹಲ್ಲೆ ಮಾಡಿ ಹೋರಾಟವನ್ನು ಹತ್ತಿಕ್ಕಲು ಹೊರಟಿದೆ. ಇದು ಸಾಧ್ಯವಾಗದ ಮಾತು. ಕೂಡಲೇ ರೈತರೊಂದಿಗೆ ಮಾತುಕತೆ ನಡೆಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ರೈತರ ಬೇಡಿಕೆಗಳನ್ನು ಈಡೇರಿಸುವ ಬದಲು ಸರಕಾರ ಅವರ ಹೋರಾಟವನ್ನು ಹತ್ತಿಕ್ಕಲು ಹೊರಟಿರುವುದು ರೈತ ವಿರೋಧಿ ಸರಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಅಂಗನವಾಡಿ ತಾಲೂಕು ಕಾರ್ಯದರ್ಶಿ ಕಾಮ್ರೆಡ್ ಪುಷ್ಪ ಮಾತನಾಡಿ, ದೇಶದಲ್ಲಿ ದುಡಿಯುವ ಜನರಿಗೆ ಇಂದು ಕನಿಷ್ಠ ವೇತನ ಇಲ್ಲದೆ ದುಡಿಯುವ ಪರಿಸ್ಥಿತಿಯನ್ನು ಆಳುವ ಸರಕಾರಗಳೇ ನಿರ್ಮಾಣ ಮಾಡುತ್ತವೆ. ಸರಕಾರಗಳು ಕೂಡಲೇ ದುಡಿಯುವ ವರ್ಗಕ್ಕೆ ಕನಿಷ್ಠ ವೇತನ ನೀಡುವಂತೆ ಒತ್ತಾಯಿಸಿದ ಅವರು ರೈತ ಕಾರ್ಮಿಕರ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಿ.ಎಚ್.ಎಸ್ ಜಿಲ್ಲಾ ಸಂಚಾಲಕ ಬೆಳ್ತೂರು ವೆಂಕಟೇಶ್, ಸಿಐಟಿಯು ತಾಲೂಕು ಸಹ ಸಂಚಾಲಕ ಶಿವರಾಮು, ತಾಲೂಕು ಅಂಗನವಾಡಿ ನೌಕರ ಸಂಘದ ತಾಲೂಕು ಅಧ್ಯಕ್ಷ ಮಂಗಳಗೌರಮ್ಮ, ಡಿಎಚ್‌ಎಸ್‌ನ ತಾ.ಅದ್ಯಕ್ಷ ತಮ್ಮಡಹಳ್ಳಿ ಮಹದೇವು, ರೈತ ಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರಚಿಕ್ಕಣ್ಣ, ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ದಸಂಸ ನಗರ ಸಂಚಾಲಕ ರಾಜು ಚಿಕ್ಕ ಹುಣಸೂರು ಮಾತನಾಡಿದರು.

ಖಜಾಂಚಿ ಕಲಾವತಿ, ಉಪಾಧ್ಯಕ್ಷೆ ನಾಗಮ್ಮ, ನಗರ ಕಾರ್ಮಿಕ ಸಂಘದ ಅಧ್ಯಕ್ಷ ಚಂದ್ರೇಗೌಡ, ಗೌರವಾಧ್ಯಕ್ಷ ಎಚ್.ಎಮ್.ಶ್ರೀಧರ್, ಮುಖಂಡರಾದ ಪ್ರೇಮ, ರೇಖಾ, ಮಣಿ, ರಂಜಿತಾ, ಪದ್ಮಭಾಯಿ, ಹೊನ್ನಮ್ಮ, ಸರಸ್ವತಿ, ಜಾನಕಿ, ಶಾರದಾ, ಅನ್ನಪೂರ್ಣ, ನಗರ ಕಾರ್ಮಿಕರ ಸಂಘದ ಮಹದೇವು, ಲಕ್ಷ್ಮಣ, ನಾಗನಹಳ್ಳಿ ಚೆಲುವರಾಜು, ಕೆಂಪರಾಮಯ್ಯ, ಸಾಲಿಡಾರಟಿ ಯುತ್ ಮೂಮಂಟ್‌ನ ಮುದಾಶೀರ್,  ಪಬ್ಲಿಕ್ ಪೀಸ್ ಕಮಿಟಿಯ ಅಜಿಬುಲ್ಲ, ರಿಜ್ವಾನ್, ಬಿಸಿಯೂಟ ಸಂಘದ ಮಂಜುಳ ಹೇಮಾ ಸೇರಿದಂತೆ 200ಕ್ಕೂ ಅಧಿಕ ಮಂದಿ ಬಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next