ಸಿರುಗುಪ್ಪ: ಕರ್ನಾಟಕ ರಾಜ್ಯ ಕೃಷಿ ಕೂಲಿಕಾರರ ತಾಲೂಕು ಸಂಘ ಹಾಗೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾಯಕ ಬಂಧುಗಳ ಹೋರಾಟ ಸಮಿತಿ ಪದಾಧಿಕಾರಿಗಳು ನರೇಗಾ ಯೋಜನೆಯ ಕೆಲಸದ ಸಮಯವನ್ನು ನಿಗದಿಪಡಿಸಿರುವುದನ್ನು ರದ್ದುಪಡಿಸುವಂತೆ ಒತ್ತಾಯಿಸಿ ತಾಲೂಕಿನ ಮಾಳಾಪುರ ಕೆರೆಯಲ್ಲಿ ಕೂಲಿ ಕೆಲಸ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಕಾಯಕ ಬಂಧು ಹೋರಾಟ ಸಮಿತಿ ಮುಖಂಡ ಬಿ. ಸುರೇಶ ಮಾತನಾಡಿ, ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಾಳಾಪುರ ಕೆರೆಯಲ್ಲಿ 10 ಪಂಚಾಯಿತಿ ಕೂಲಿ ಕಾರ್ಮಿಕರು ಇಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರಿಗೆ ಆದೇಶ ನೀಡಿದ್ದಾರೆ. ಇದರಲ್ಲಿ ಗರ್ಭಿಣಿಯರು, ವಯೋವೃದ್ಧರು ತಮ್ಮ ಜೀವನ ನಿರ್ವಹಣೆಗಾಗಿ ಕೆಲಸ ಮಾಡುತ್ತಿದ್ದಾರೆ.
ಆದರೆ ಬೆಳಗ್ಗೆ 6 ಗಂಟೆಯಿಂದ 11ಗಂಟೆಯವರೆಗೆ, ಮಧ್ಯಾಹ್ನ 2ರಿಂದ 5ಗಂಟೆವರೆಗೆ ಕೂಲಿ ಕೆಲಸ ಮಾಡಲು ಸರ್ಕಾರ ಸಮಯ ನಿಗಮಾಡಿದ್ದು ಸರಿಯಾದ ಕ್ರಮವಲ್ಲ. ನಮ್ಮ ತಾಲೂಕಿನಲ್ಲಿ ಈಗಾಗಲೇ ಬಿಸಿಲಿನ ತಾಪ 40 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು ಬಿಸಿಲಿನಲ್ಲಿ ಕಾರ್ಮಿಕರು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಬಿಸಿಲಿನಲ್ಲಿ ಕೆಲಸ ಮಾಡಿದರೆ ಅಸ್ವಸ್ಥರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ನರೇಗಾ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ನಿಗದಿಪಡಿಸಿದ ಸಮಯವನ್ನು ತೆಗೆದುಹಾಕಿ ಮೊದಲಿನಂತೆ ಕೆಲಸ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು.
ಕಾರ್ಮಿಕರು ಕೆಲಸ ನಿರ್ವಹಿಸುವ ಸ್ಥಳದಲ್ಲಿ ವಿಶ್ರಾಂತಿ ಪಡೆಯಲು ಶಾಮಿಯಾನ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕು. ಆರೋಗ್ಯ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಬೇಕು. ಸರ್ಕಾರವು ನಿಗದಿ ಮಾಡಿದ ಸಮಯ ರದ್ದುಮಾಡಿ ಮೊದಲಿನಂತೆ ಉದ್ದ, ಅಗಲ ಮತ್ತು ಆಳದ ಆಧಾರದ ಮೇಲೆ ಕೆಲಸ ಮಾಡಲು ಆದೇಶಿಸಬೇಕು.
ಕೆಲಸದ ಸಮಯದಲ್ಲಿ ಅಸ್ವಸ್ಥಗೊಂಡ ಕಾರ್ಮಿಕರಿಗೆ ಸರ್ಕಾರವೇ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಬೇಕು. ಕಾರ್ಮಿಕರು ಕೆರೆಯಿಂದ ಅಗೆದ ಮಣ್ಣನ್ನು ಸಂಗ್ರಹಿಸಿ ಅದನ್ನು ಮಾರಾಟ ಮಾಡಿ ಬರುವ ಆದಾಯದಲ್ಲಿ ಕೂಲಿ ಕಾರ್ಮಿಕರ ವಾಹನದ ಬಾಡಿಗೆ ಹಣವನ್ನು ನೀಡಬೇಕು. 7 ದಿನಗಳ ಎನ್‌ಎಂಆರ್ ರದ್ದುಪಡಿಸಿ 15 ದಿನಗಳವರೆಗೆ ವಿಸ್ತರಿಸಬೇಕು. ಸ್ಥಳೀಯ ಕಾಮಗಾರಿಗೆ ಮೊದಲು ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು. ಎಎಪಿ ಮುಖಂಡ ಟಿ. ಧರಪ್ಪ ನಾಯಕ ಮಾತನಾಡಿದರು.
ಆಲಂಬಾಷ, ಅಡಿವೆಪ್ಪ, ಜಿತೇಂದ್ರ, ಮಂಜು, ಶರಣ, ಪಂಪಾಪತಿ, ರಮೇಶ, ಶೇಕಣ್ಣ, ಓಬಳೇಶ, ರಾಮು ಹಾಗೂ ವಿವಿಧ ಗ್ರಾಮಗಳ ಕೂಲಿ ಕಾರ್ಮಿಕರು, ಕಾಯಕ ಬಂಧುಗಳು ಇದ್ದರು.