ಹೊಸಪೇಟೆ: ಕೊರೊನಾ ಸಂಕಷ್ಟ ಕಾಲದಲ್ಲಿ ಕಾರ್ಯ ನಿರ್ವಹಿಸಿರುವ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಸೇವೆಯನ್ನು ಮುಂದುವರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಸಂಯುಕ್ತ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕೊರೊನಾ ಸಂಕಷ್ಟ ಕಾಲದಲ್ಲಿ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರರು ಜೀವದ ಹಂಗು ತೊರೆದು ಕೊರೊನಾ ಸೋಂಕಿತರ ಸೇವೆ ಮಾಡಿದ್ದಾರೆ. ಇದೀಗ ಕೊರೊನಾ ಹತೋಟಿಗೆ ಬಂದಿರುವ ಹಿನ್ನೆಲೆಯಲ್ಲಿ ಸರಕಾರ ಗುತ್ತಿಗೆ ನೌಕರರನ್ನು ಸೇವೆಯಿಂದ ಕೈಬಿಡಲು ತೀರ್ಮಾನಿಸಿದ್ದು ಸರಿಯಾದ ಕ್ರಮವಲ್ಲ. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮುಂದಿನ ನೇಮಕಾತಿ ಆಗುವವರೆಗೂ ನಮ್ಮ ಸೇವೆಯನ್ನು ಮುಂದುವರಿಸಬೇಕು. ನೇರ ನೇಮಕಾತಿಯಲ್ಲಿ ನಮ್ಮ ಸೇವೆಯನ್ನು ಪರಿಗಣಿಸಿ, ಮೊದಲ ಆದ್ಯತೆ ನೀಡಬೇಕು. ಜತೆಗೆ ವಯಸ್ಸಿನ ಸಡಿಲಿಕೆ ನೀಡಬೇಕು. ಕೊರೊನಾ ವಿಶೇಷ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಎಸ್.ನಿರಂಜನ್ ಕುಮಾರ್ ಮಾತನಾಡಿ, ಜನರ ಪ್ರಾಣ ರಕ್ಷಣೆಗಾಗಿ ಹೋರಾಡಿದವರನ್ನು ಏಕಾಏಕಿ ಸೇವೆಯಿಂದ ಕೈಬಿಡುವುದು ಸರಿಯಲ್ಲ. ಕರೊನಾದಂತ ಭೀಕರ ಸಮಯದಲ್ಲಿ ತಮ್ಮ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡಿದ್ದೇವೆ. ಕೆಲಸವನ್ನೇ ನಂಬಿಕೊಂಡು ಜೀವನ ನಡೆಸಿದ್ದೇವೆ. ಸರ್ಕಾರ ಕೆಲಸದಿಂದ ತೆಗೆಯುತ್ತಿರುವುದರಿಂದ ಮುಂದಿನ ಜೀವನ ಸಾಗಿಸುವುದಾದಾರು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಆದ್ದರಿಂದ ಕೂಡಲೇ ನಮ್ಮನ್ನು ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ತುಂಗಾಶ್ರೀ, ಗೌರಿ, ಶಾರಾದ ಬಾರೆ, ಸಿದ್ದಲಿಂಗೇಶ್, ಜಂಬಣ್ಣ, ಶ್ರೀಧರ್ ಅವಿನಾಶ್, ಮಾರೇಶ್, ಮಲ್ಲಪ್ಪ ಹಾಗೂ ರಾಜುನಾಯ್ಕ ಮತ್ತಿತರರಿದ್ದರು.