Advertisement

ಕೈನಿಂದ ಅಶಾಂತಿ ಸೃಷ್ಟಿಸುವ ಯತ್ನ

04:04 PM Jun 03, 2022 | Team Udayavani |

ಚಿಕ್ಕಮಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರ ನಿವಾಸದ ಮೇಲೆ ಎನ್‌ಎಸ್‌ಯುಐ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆ ಖಂಡಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಗುರುವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಆಜಾದ್‌ ಪಾರ್ಕ್‌ ವೃತ್ತದವರೆಗೂ ಮೆರವಣಿಗೆ ನಡೆಸಿದ ಕಾರ್ಯಕರ್ತರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರೇಮ್‌ಕುಮಾರ್‌ ಮಾತನಾಡಿ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಮತ್ತು ಅಧಿಕಾರ ಕಳೆದುಕೊಂಡಾಗ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಿ ಅಧಿಕಾರ ಹಿಡಿಯಲು ಸಂಚು ರೂಪಿಸಿದೆ. ಇದೀಗ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಶಿಕ್ಷಣ ಸಚಿವರ ಮೇಲೆ ದಾಳಿ ನಡೆಸಲು ಕುಮ್ಮಕ್ಕು ನೀಡಿದೆ ಎಂದು ಆರೋಪಿಸಿದರು. ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ರದ್ದುಗೊಳಿಸುವಂತೆ ಕೆಲವು ಸಾಹಿತಿಗಳು, ಲೇಖಕರು ಪಠ್ಯ ಹಿಂತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಇವರ ಈ ನಡೆ ಅನುಮಾನ ಹುಟ್ಟಿಸಿದ್ದು ಕಾಂಗ್ರೆಸ್‌ನಿಂದ ಹಣ ಪಡೆದು ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದರು.

ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಬೌದ್ಧಿಕವಾಗಿ ಎದುರಿಸಲಾಗದೆ ಕಾಂಗ್ರೆಸ್‌ನವರು ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಈ ರೀತಿಯ ಷಡ್ಯಂತ್ರ ನಡೆಸಿದ್ದಾರೆ. ಪಠ್ಯವನ್ನು ಹಿಂತೆಗೆದುಕೊಳ್ಳುವಂತೆ ಪತ್ರ ಬರೆಯುತ್ತಿರುವ ಲೇಖಕರು ಸರ್ಕಾರ ನೀಡಿರುವ ಪ್ರಶಸ್ತಿ ಮತ್ತು ಹಣವನ್ನು ವಾಪಸ್‌ ನೀಡಲಿ. ಜೊತೆಗೆ ಪಠ್ಯ ಪರಿಷ್ಕರಣೆಗೆ ವೆಚ್ಚಾಗಿರುವ ಹಣವನ್ನು ಭರಿಸುವಂತೆ ಆಗ್ರಹಿಸಿದರು.

ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಕೋಟ್ಯಾನ್‌ ಮಾತನಾಡಿ, ಶಿಕ್ಷಣ ಸಚಿವರ ಮನೆ ಮೇಲಿನ ದಾಳಿ ಪೂರ್ವ ನಿಯೋಜಿತವಾಗಿದೆ. ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಿಂಬಾಲಕರ ಕೈವಾಡವಿದೆ. ಸರ್ಕಾರ ದಾಳಿಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಯುವಮೋರ್ಚಾ ಉಪಾಧ್ಯಕ್ಷ ಸಚಿನ್‌, ನಗರ ಅಧ್ಯಕ್ಷ ರಾಜೇಶ್‌, ಗ್ರಾಮಾಂತರ ಮಂಡಲ ಅಧ್ಯಕ್ಷ ಯತೀಶ್‌, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್‌, ಸದಸ್ಯ ಮಣಿಕಂಠ, ನಗರ ಪ್ರಧಾನ ಕಾರ್ಯದರ್ಶಿ ಪುನೀತ್‌, ಎಸ್‌.ಸಿ. ಮೋರ್ಚಾದ ಕೇಶವಮೂರ್ತಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next