ಮೈಸೂರು: ಕೇಂದ್ರ ಸರ್ಕಾರ ಬಿಇಎಂಎಲ್‌ನ ಶೇ.54ರಷ್ಟು ಷೇರುಗಳಲ್ಲಿ ಶೇ.26ರಷ್ಟನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿರುವುದನ್ನು ಖಂಡಿಸಿ ಬಿಇಎಂಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ವತಿಯಿಂದ ಧರಣಿ ನಡೆಸಲಾಯಿತು.
ಬುಧವಾರ ಬೆಳಗ್ಗೆ ಗೇಟ್ ಮೀಟಿಂಗ್ ಮುಕ್ತಾಯ ಮಾಡಿ ಕರ್ತವ್ಯಕ್ಕೆ ತೆರಳಿದ್ದ ಕಾರ್ಮಿಕ ಪದಾಧಿಕಾರಿಗಳು ನಗರದ ಬಿಇಎಂಎಲ್ ಗೇಟಿನ ಮುಂಭಾಗ ಸಮಾವೇಶಗೊಂಡ ನೌಕರರು ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಇಎಂಎಲ್ ಕರ್ನಾಟಕದಲ್ಲಿನ ಪ್ರಮುಖ ಕೇಂದ್ರೋದ್ಯಮವಾಗಿದ್ದು, ಇಂತಹ ಬೃಹತ್ ರಕ್ಷಣಾ ವಲಯದ ಉದ್ಯಮವನ್ನು ಕೇಂದ್ರ ಸರ್ಕಾರ ಶೇ.26ರಷ್ಟು ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದೆ. ಇದರಿಂದ ಸಂಸ್ಥೆಯ ಸುಮಾರು 8500 ಖಾಯಂ ಉದ್ಯೋಗಿಗಳು ಹಾಗೂ ಸುಮಾರು 4500 ಗುತ್ತಿಗೆ ಕಾರ್ಮಿಕರಿಗೆ ಭವಿಷ್ಯದಲ್ಲಿ ಕೆಲಸದ ಅಭದ್ರತೆ ತಲೆದೋರಲಿದೆ ಎಂದು ಕಿಡಿ ಕಾರಿದರು.
ಕೂಡಲೇ ಬಿಇಎಂಎಲ್‌ನ ಶೇ.26ರಷ್ಟು ಷೇರು ಮಾರಾಟ ನಿಲ್ಲಿಸಬೇಕು. ಬಿಇಎಂಎಲ್ ದೇಶದ ಆಸ್ತಿಯಾಗಿದ್ದು ಖಾಸಗೀಕರಣ ಮಾಡಬಾರದು, ಬಿಇಎಂಎಲ್ ದೇಶದ ರಕ್ಷಣಾವಲಯದ ಪ್ರಮುಖ ಸಂಸ್ಥೆಯಾಗಿದ್ದು, ರಾಷ್ಟ್ರೀಯ ಹಿತಾಸಕ್ತಿಗಾಗಿ ಸಂಸ್ಥೆಯನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ಅಸೋಸಿಯೇಷನ್ ಅಧ್ಯಕ್ಷ ದೇವದಾಸ್, ಕಾರ್ಯದರ್ಶಿ ನಾಗಶಯನ, ಬೆಂಗಳೂರು ಸಂಕೀರ್ಣದ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸರೆಡ್ಡಿ, ಕೆಜಿಎಫ್ ಸಂಕೀರ್ಣದ ಅಧ್ಯಕ್ಷ ಆಂಜನೇಯ ರೆಡ್ಡಿ.ಕೆ, ಬೆಂಗಳೂರು ಕೇಂದ್ರ ಕಚೇರಿಯ ಅಧ್ಯಕ್ಷ ಜೆ.ಮುನ್ನಾಗಪ್ಪ, ಮೈಸೂರು ಸಂಕೀರ್ಣದ ನಿಯೋಜಿತ ಅಧ್ಯಕ್ಷ ಗೋವಿಂದರೆಡ್ಡಿ, ಪಾಲಕ್ಕಾಡ್ ಸಂಕೀರ್ಣದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಪಿ.ಹಿರೇಮs… ಉಪಸ್ಥಿತರಿದ್ದರು.