Advertisement

ಬ್ಯಾಂಕಿಂಗ್‌ ಪರೀಕ್ಷೆ ರಾಜ್ಯಾದ್ಯಂತ ಕಿಡಿ

06:00 AM Sep 10, 2017 | Team Udayavani |

ಬೆಂಗಳೂರು: ಬ್ಯಾಂಕ್‌ ಸಿಬ್ಬಂದಿ ನೇಮಕ ಸಂಸ್ಥೆ “ಇನ್‌ ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌’
(ಐಬಿಪಿಎಸ್‌) ನಡೆಸುವ ರಾಷ್ಟ್ರಮಟ್ಟದ ಬ್ಯಾಂಕಿಂಗ್‌ ಪರೀಕ್ಷೆಗಳಲ್ಲಿ ಕನ್ನಡವೂ ಸೇರಿ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ
ನೀಡಬೇಕು ಎಂದು ಆಗ್ರಹಿಸಿ ಶನಿವಾರ ಅಭ್ಯರ್ಥಿಗಳು ರಾಜ್ಯದ ಕೆಲವೆಡೆ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

Advertisement

ಈ ಮಧ್ಯೆ, ಹುಬ್ಬಳ್ಳಿಯ ವಿದ್ಯಾನಗರದ ಅಕ್ಷಯ ಕಾಲೋನಿಯ ಐಬಿಎಂಆರ್‌ ಕಾಲೇಜಿನ ಪರೀಕ್ಷಾ ಕೇಂದ್ರದ ಎದುರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಭ್ಯರ್ಥಿಯೊಬ್ಬ ಕೈಗೆ ಬ್ಲೇಡ್‌ನಿಂದ ಗಾಯ ಮಾಡಿಕೊಂಡಿದ್ದರಿಂದ ಕೆಲ ಕಾಲ ಉದ್ರಿಕ್ತ
ಸ್ಥಿತಿ ನಿರ್ಮಾಣಗೊಂಡಿತ್ತು. ಅಲ್ಲದೆ, ಕಲ್ಲು ತೂರಾಟ ಕೂಡ ನಡೆದು, ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪ್ರತಿಭಟನೆಗೆ ಕನ್ನಡಪರ ಸಂಘಟನೆಗಳು ಸಾಥ್‌ ನೀಡಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಉಳ್ಳಾಲ ಹಾಗೂ ಪೀಣ್ಯದಲ್ಲಿ ಪರೀಕ್ಷೆಗಳು ರದ್ದುಗೊಂಡವು.

ಬೆಂಗಳೂರಿನ ಎರಡು ಕಡೆ ಪರೀಕ್ಷೆ ರದ್ದು: ಬೆಂಗಳೂರಿನ ಪೀಣ್ಯ, ರಾಜರಾಜೇಶ್ವರಿನಗರ, ಉಳ್ಳಾಲ ಉಪನಗರ, ಕೆ.ಆರ್‌.ಪುರಂ, ಕುಮಾರಸ್ವಾಮಿ ಬಡಾವಣೆ, ವಿದ್ಯಾರಣ್ಯಪುರ,ಬಾಣಸವಾಡಿ ಕೇಂದ್ರಗಳು, ಧಾರವಾಡ, ಕಲಬುರಗಿ ಸೇರಿದಂತೆ ರಾಜ್ಯದ ಹಲವೆಡೆ ಶನಿವಾರ ಐಬಿಪಿಎಸ್‌ ಪರೀಕ್ಷೆ ನಡೆಯಬೇಕಿತ್ತು. ತಲಾ 45 ನಿಮಿಷಗಳ 5 ಬ್ಯಾಚ್‌ಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಯಿತು. ಆದರೆ, ಬೆಂಗಳೂರಿನ ಉಳ್ಳಾಲದಲ್ಲಿ ಕರವೇ(ನಾರಾ ಯಣಗೌಡ ಬಣ), ಪೀಣ್ಯದಲ್ಲಿ ಕನ್ನಡ ಪಕ್ಷದ ಕಾರ್ಯಕರ್ತರು ತೀವ್ರ ಹೋರಾಟ ಮಾಡಿದ್ದರಿಂದ ಪರೀಕ್ಷೆಗಳು ರದ್ದುಗೊಂಡವು. ಉಳಿದ 5 ಕಡೆ ಪರೀಕ್ಷೆಗಳನ್ನು ನಡೆಸಲಾಯಿತು.

ಇತ್ತೀಚಿನ ದಿನಗಳಲ್ಲಿ ಹಿಂದಿ ಹಾವಳಿ ಹೆಚ್ಚಾಗುತ್ತಿದ್ದು, ಬ್ಯಾಂಕಿಂಗ್‌ ಸೇರಿದಂತೆ ಕೇಂದ್ರ ಸೇವೆಗಳ ಎಲ್ಲ ಪರೀಕ್ಷೆಗಳಲ್ಲೂ
ಹಿಂದಿ ಹೇರಿಕೆ ವಿಪರೀತಗೊಂಡಿದೆ. ಇದರಿಂದ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಕನ್ನಡದಲ್ಲಿಯೂ ಪರೀಕ್ಷೆ
ನಡೆಸಬೇಕು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಪರೀಕ್ಷೆ ನಡೆಸಲು ಬಿಡುವುದಿಲ್ಲ ಎಂಬುದು ಅಭ್ಯರ್ಥಿಗಳು ಅಳಲು.
ಇದೇ ವೇಳೆ, ನಿರೀಕ್ಷಿತ ಮಟ್ಟದಲ್ಲಿ ಕನ್ನಡಪರ ಸಂಘಟನೆಗಳು ಈ ಹೋರಾಟಕ್ಕೆ ಸ್ಪಂದಿಸಲಿಲ್ಲ ಎಂಬ ಆಕ್ರೋಶವೂ ಅಭ್ಯರ್ಥಿಗಳಿಂದ ವ್ಯಕ್ತವಾಯಿತು.

ಇಂದೂ ಅವಕಾಶ ನೀಡಲ್ಲ; ಎಚ್ಚರಿಕೆ: ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳ ಮುಂದೆ ಪ್ರತಿಭಟನೆ ನಡೆಸುತ್ತಿದ್ದ
ಅಭ್ಯರ್ಥಿಗಳೊಂದಿಗೆ ದನಿಗೂಡಿಸಿದ ಕನ್ನಡಪರ ಹೋರಾಟಗಾರರು, ಸಮಸ್ಯೆ ಇತ್ಯರ್ಥವಾಗುವವರೆಗೆ ಬ್ಯಾಂಕಿಂಗ್‌ ಪರೀಕ್ಷೆ ತಡೆ ಹಿಡಿಯಲು ಶಿಫಾರಸು ಮಾಡುವಂತೆ ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಕೂಡ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಆದರೂ, ಪರೀಕ್ಷೆ ನಡೆಸಲಾಗುತ್ತಿದೆ. ಪ್ರಾದೇಶಿಕ ಭಾಷೆಗೆ ಹಾಗೂ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

Advertisement

ಪ್ರತಿಭಟನೆಗೆ ಕೈಜೋಡಿಸಿದ ಕನ್ನಡಪರ ಸಂಘಟನೆಗಳು, ಭಾನುವಾರ ಕೂಡ ಬ್ಯಾಂಕಿಂಗ್‌ಗೆ ಸಂಬಂಧಿಸಿದಂತೆ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಯುತ್ತಿದೆ. ಇದಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿವೆ. ಸ್ಥಳೀಯ ಭಾಷಾ ಪ್ರೌಢಿಮೆ ಕುರಿತ ವಿವಾದ ಇತ್ಯರ್ಥವಾಗುವವರೆಗೆ ಬ್ಯಾಂಕಿಂಗ್‌ ಸೇವೆಗಳ ನೇಮಕಾತಿಗೆ ಐಬಿಪಿಎಸ್‌ ನಡೆಸುವ ಅಖೀಲ ಭಾರತ ಮಟ್ಟದ ಪರೀಕ್ಷೆ ನಡೆಸಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಅನ್ಯಭಾಷಿಕರ ಅಸಮಾಧಾನ: ಕರ್ನಾಟಕ ಸರ್ಕಾರ ಸೂಚಿಸಿರುವಂತೆ ನೇಮಕವಾದ 6 ತಿಂಗಳಿನಲ್ಲಿ ಕನ್ನಡ
ಕಲಿಯುತ್ತೇವೆ. ಆದರೆ, ಪರೀಕ್ಷೆಯನ್ನೇ ಬರೆಯಲು ಬಿಡದಿದ್ದರೆ ಹೇಗೆ?. ನಾವು ಕೂಡ ಭಾರತೀಯರಲ್ಲವೇ? ದೂರದ ಆಂಧ್ರ ಪ್ರದೇಶದಿಂದ ಪರೀಕ್ಷೆಗಾಗಿ ಬಂದಿದ್ದೇವೆ. ಈ ವಿಚಾರದಲ್ಲಿ ರಾಜಕೀಯ ಮಾಡದೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ. ಹಿಂದಿ, ಇಂಗ್ಲಿಷ್‌ ಬಲ್ಲವರು ಪರೀಕ್ಷೆ ಬರೆಯುತ್ತಾರೆ ಎಂದು ಆಂಧ್ರ ಪ್ರದೇಶ ಮೂಲದ ಕೆಲವು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಬ್ಲೇಡ್‌ನಿಂದ ಕೈಗೆ ಗಾಯ
ಹುಬ್ಬಳ್ಳಿ:
ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ ಹೊರ ರಾಜ್ಯದವರಿಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಪರೀಕ್ಷಾರ್ಥಿಗಳು
ಇಲ್ಲಿನ ವಿದ್ಯಾನಗರದ ಅಕ್ಷಯ ಕಾಲೋನಿಯ ಐಬಿಎಂಆರ್‌ ಕಾಲೇಜಿನ ಪರೀಕ್ಷಾ ಕೇಂದ್ರದ ಬಳಿ ಶನಿವಾರ ದಿಢೀರ್‌ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿಯೊಬ್ಬ ಕೈಗೆ ಬ್ಲೇಡ್‌ನಿಂದ ಗಾಯ ಮಾಡಿಕೊಂಡಿದ್ದರಿಂದ ಕೆಲ ಕಾಲ ಉದ್ರಿಕ್ತ ಸ್ಥಿತಿ ನಿರ್ಮಾಣಗೊಂಡಿತ್ತು. ತಕ್ಷಣ ಆತನನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಹೊರ ರಾಜ್ಯದವರಿಗೆ ಪರೀಕ್ಷಾ ಕೇಂದ್ರದೊಳಗೆ ಹೋಗಲು ತಡೆಯೊಡ್ಡಿದ ಪರಿಣಾಮ ಪರೀಕ್ಷಾರ್ಥಿಗಳ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದಾಗ ರೊಚ್ಚಿಗೆದ್ದ ಕೆಲವರು ಪರೀಕ್ಷಾ ಕೇಂದ್ರ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು.ಪೊಲೀಸರು ಅಭ್ಯರ್ಥಿಗಳನ್ನು ಪ್ರತಿಭಟನಾ ಸ್ಥಳದಿಂದ ಚದುರಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದರು .

Advertisement

Udayavani is now on Telegram. Click here to join our channel and stay updated with the latest news.

Next