ಯಳಂದೂರು: ತಾಲೂಕಿನ ವಡಗೆರೆ ಗ್ರಾಮದಲ್ಲಿ ಗುರುವಾರ ರಾತ್ರಿ ಕಾಡಾನೆಗಳು ಬೆಳೆ ಹಾನಿಗೊಳಿಸಿರುವ ಕಾರಣ ಈ ಭಾಗದ ರೈತರು ಗುಂಬಳ್ಳಿ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ರಸ್ತೆ ತಡೆದು ಪ್ರತಿಭಟಿಸಿದರು.
ಗ್ರಾಮದಲ್ಲಿ ಕಬ್ಬು, ಮುಸುಕಿನಜೋಳ, ತೆಂಗನ್ನು ಕಾಡಾನೆಗಳು ನಾಶ ಪಡಿಸಿವೆ. ಜೊತೆಗೆ ತಂತಿ ಬೇಲಿ, ಕಲ್ಲಿನ ಕಂಬ, ಡ್ರಿಪ್‌ನ ಪೈಪ್‌ಗ್ಳನ್ನು ನಾಶಪಡಿಸಿವೆ. ಚೆಕ್ ಪೋಸ್ಟ್‌ನ ಕೂಗಳತೆ ದೂರದಲ್ಲೇ ಈ ಜಮೀನು ಇದೆ. ರಾತ್ರಿ ವೇಳೆ ಇಲಾಖೆಯ ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಇಲ್ಲಿಗೆ ಸಮೀಪದ ಅರಣ್ಯ ಪ್ರದೇಶದಿಂದಲೇ ಕಾಡಾನೆಗಳು ಕಂದಕ ಹಾಗೂ ಬೇಲಿ ದಾಟಿ ಬರುತ್ತವೆ. ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಫಸಲು ನಷ್ಟವಾಗಿದೆ. ಸಿಬ್ಬಂದಿ ರಾತ್ರಿ ವೇಳೆ ಸರಿಯಾಗಿ ಗಸ್ತು ತಿರುಗುವುದಿಲ್ಲ. ಕಾಡು ಪ್ರಾಣಿಗಳು ಬಂದರೆ ಫೋನ್ ಮಾಡಿದರೂ ಸ್ಪಂದಿಸುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇಲಾಖೆ ನೀಡುವ ಬೆಳೆನಷ್ಟ ಪರಿಹಾರ ಕೂಡ ಅಲ್ಪ ಪ್ರಮಾಣದ್ದಾಗಿದೆ. ಮೇಲಧಿಕಾರಿಗಳ ಗಮನ ಹರಿಸಿ ಕಾಡಾನೆ ಹಾವಳಿ ತಡೆದು ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಸ್ಥಳಕ್ಕೆ ಅರಣ್ಯ ಇಲಾಖೆ ಎಸಿಎಫ್ ರಮೇಶ್ ಹಾಗೂ ಆರ್‌ಎಫ್ಒ ಲೋಕೇಶ್‌ಮೂರ್ತಿ ಭೇಟಿ ನೀಡಿ, ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಯಳಂದೂರು ವ್ಯಾಪ್ತಿಯಲ್ಲಿ ಹೊಸ ಕಂದಕ ಹಾಗೂ ಬೇಲಿ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ನಟರಾಜಗೌಡ, ವಡಗೆರೆ ವಿಜಯ್, ರೇವಣ್ಣ, ಗಿರೀಶ್, ಬಸವರಾಜು, ಕಿರಣ್ ಸೇರಿದಂತೆ ಮತ್ತಿತರರಿದ್ದರು.