ಚಾಮರಾಜನಗರ: ಅಗತ್ಯ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ಶೇಕಡಾ 5 ರಷ್ಟು ತೆರಿಗೆಯನ್ನು ಕೂಡಲೇ ರದ್ದು ಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಆವರಣದಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆತಡೆ ನಡೆಸಿ, ರದ್ದು ಮಾಡಿ ಜಿಎಸ್ ಟಿ ರದ್ದುಮಾಡಿ ಎಂದು ಘೋಷಣೆ ಕೂಗಿ, ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ಎಂದು ಬರೆದಿದ್ದ ಫ್ಲೆಕ್ಸ್ ಸುಟ್ಟು ಕೇಂದ್ರ ಸರ್ಕಾರದ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಜೂನ್ 28, 29 ರಂದು ಜಿ.ಎಸ್.ಟಿ, ಮಂಡಳಿಯು ಅಗತ್ಯ ವಸ್ತುಗಳ ಮೇಲೆ ಶೇಕಡಾ 5 ರಷ್ಟು ತೆರಿಗೆಯನ್ನು ವಿಧಿಸಿರುವುದು ದೇಶದಾದ್ಯಂತ ಜು. 1 ರಂದು ಜಾರಿಗೆ ಬಂದಿರುವುದರಿಂದ ರೈತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆಹಾರ ಪದಾರ್ಥಗಳ ಮೇಲೆ ವಿಧಿಸಿರುವ ಶೇ.5 ರಷ್ಟು ತೆರಿಗೆಯನ್ನು ಕೂಡಲೇ ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.
ತಿನ್ನುವ ಆಹಾರ ಪದಾರ್ಥಗಳಾದ ಅಕ್ಕಿ, ಜೋಳ, ರಾಗಿ ಇನ್ನಿತರ ಆಹಾರ ಧಾನ್ಯಗಳ ಮೇಲೆ ಶೇಕಡಾ 5 ರಷ್ಟು ತೆರಿಗೆಯನ್ನುಕೇಂದ್ರ ಸರಕಾರ ವಿಧಿಸಿರುವ ಜಿಎಸ್ಟಿ ಮುಖ್ಯವಾಗಿ ರೈತರಿಗೆ, ಕೈಗಾರಿಕ ಉದ್ದಿಮೆದಾರರಿಗೆ ಹಾಗೂ ಅಕ್ಕಿ ಖರೀದಿ ಮಾಡುವ ಜನಸಾಮಾನ್ಯರಿಗೆ ಮಧ್ಯಮ ವರ್ಗದವರಿಗೆ ಕಷ್ಟವಾಗುತ್ತದೆ. ಅಲ್ಲದೇ ಕಾರ್ಮಿಕರು, ಬಡವರು, ಮಧ್ಯಮ ವರ್ಗದವರಿಗೆ ದಿನನಿತ್ಯ ಬಳಸುವ ಅವಶ್ಯಕ ಪದಾರ್ಥಗಳ ಇವುಗಳ ಮೇಲಿನ ತೆರಿಗೆಯಿಂದ ಜನಸಾಮಾನ್ಯರ ಜೀವನ ಪರಿದಾಡುವಂತ ಪರಿಸ್ಥಿತಿ ಎದುರಾಗುತ್ತದೆ. ಕೂಡಲೇ ಆಹಾರ ಪದಾರ್ಥಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಕೂಡಲೇ ರದ್ದು ಪಡಿಸಬೇಕು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಾ.ಮುರಳಿ, ಕಂಡಕ್ಟರ್ ಚಾ.ಸಿ.ಸೋಮನಾಯಕ, ಪಣ್ಯದಹುಂಡಿ ರಾಜು, ಗು.ಪುರುಷೋತ್ತಮ್, ಚಾ.ರಾ.ಕುಮಾರ್, ರವಿಚಂದ್ರ ಪ್ರಸಾದ್ ಕಹಳೆ, ವೀರಭದ್ರ, ತಾಂಡವಮೂರ್ತಿ ಇತರರು ಭಾಗವಹಿಸಿದ್ದರು.