Advertisement

ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ

11:26 AM Nov 13, 2018 | Team Udayavani |

ಕಲಬುರಗಿ: ಕೇರಳದಲ್ಲಿರುವ ಪವಿತ್ರ ಶಬರಿಮಲೈ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಶಬರಿಮಲೆ ಪವಿತ್ರ್ಯ ಉಳಿಸಿ ಹೋರಾಟ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಶಬರಿಮಲೆ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಪರಂಪರೆಯಿದೆ. ಹಿಂದೂ ಧರ್ಮದ ನಂಬಿಕೆ ಹಾಳು ಮಾಡುವ ವ್ಯವಸ್ಥಿತ ಪಿತೂರಿ ಕೇರಳದ ಕಮ್ಯುನಿಷ್ಟ್ ಸರ್ಕಾರದಿಂದ ನಡೆಯುತ್ತಿದೆ. ಸುಪ್ರಿಂಕೋರ್ಟ್‌ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದರೂ ಆ ಮೇಲ್ಮನವಿ ಸಲ್ಲಿಸಲು ಅಯ್ಯಪ್ಪ ಭಕ್ತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಕೇರಳ ಸರ್ಕಾರಕ್ಕೆ ಮನವಿ ಮಾಡಿದರೂ ಕೇರಳ ಸರ್ಕಾರ ಮೇಲ್ಮನವಿ ಸಲ್ಲಿಸದೇ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ಜಾರಿಗೆ ಕ್ರಮ ಕೈಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ದೇವಸ್ಥಾನದ ಆಚರಣೆಗಳನ್ನು ಬದಲಾವಣೆ ಮಾಡುವುದು ದೇವಸ್ಥಾನದ ಭಕ್ತರ ಅಧಿಕಾರ. ಭಕ್ತರಲ್ಲದ ವ್ಯಕ್ತಿಗಳ ವಾದವನ್ನು ನ್ಯಾಯಾಲಯ ಕೇಳಿ ತೀರ್ಪು ನೀಡಿದೆ. ಧಾರ್ಮಿಕ ನಂಬಿಕೆಗಳಲ್ಲಿ ನ್ಯಾಯಾಲಯದ ಹಸ್ತಕ್ಷೇಪ ಸಲ್ಲದು. ಅಯ್ಯಪ್ಪ
ದೇವಸ್ಥಾನಕ್ಕೆ ಅನ್ಯ ಧರ್ಮಿಯ ಮಹಿಳೆಯರ ಪ್ರವೇಶ ಮಾಡುವುದಂತೂ ಸರಿಯಲ್ಲ. ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವ ನೀಡಲಾಗುತ್ತಿದೆ. ಪೂಜ್ಯನೀಯ ದೃಷ್ಟಿಯಿಂದ ನೋಡಲಾಗುತ್ತಿದೆ. ದೇವಸ್ಥಾನದ ಪ್ರವೇಶಕ್ಕೆ ಹೋಗುವ ಮಹಿಳೆಯರಿಗೆ ನಮಸ್ಕರಿಸಿ ಹಿಂದಕ್ಕೆ ಹೋಗುವಂತೆ ಅಯ್ಯಪ್ಪ ಭಕ್ತರು ಕೋರುತ್ತಿದ್ದಾರೆ. ಆದರೂ ಕೇರಳ ಸರ್ಕಾರದ ಕುಮ್ಮಕ್ಕಿನಿಂದ ಷಡ್ಯಂತ್ರ ರೂಪಿಸಿ ಅನ್ಯ ಧರ್ಮಿಯ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಕುಮ್ಮಕ್ಕು ನೀಡಲಾಗುತ್ತಿದೆ. ಕೂಡಲೇ ಅದನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಕೇರಳ ಸರ್ಕಾರ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನೀಡುವ ಕುರಿತು ಸುಪ್ರಿಂಕೋರ್ಟ್‌ ನೀಡಿದ ತೀರ್ಪು ಪ್ರಶ್ನಿಸಿ ಕೂಡಲೇ ಮೇಲ್ಮನವಿ ಸಲ್ಲಿಸುವಂತೆ ಆಗ್ರಹಿಸಿದರು. ಮಹಿಳೆಯರ ಪ್ರವೇಶ ತಡೆದ ಅಮಾಯಕ 2000 ಜನ ಅಯ್ಯಪ್ಪ ಭಕ್ತರನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿದೆ. ಕೂಡಲೇ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸಮಿತಿ ಅಧ್ಯಕ್ಷ ವಿಜಯಕುಮಾರ ದೇಶಮುಖ, ಜಿಲ್ಲಾ ಸಂಚಾಲಕ ಶಿವರಾಜ ಸಂಗೋಳಗಿ, ಸಮಿತಿ ಕಾರ್ಯಾಧ್ಯಕ್ಷ ಪ್ರಭು ಹಾದಿಮನಿ, ಸಂಚಾಲಕ ಶಿವರಾಜ ಸಂಗೋಳಗಿ, ಶಾಂತು ಬಿರಾದಾರ, ಮಲ್ಲಿನಾಥ ಅವರಾದಿ ಸೇರಿದಂತೆ ನೂರಾರು ಮಾಲಾಧಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next