ಸಕಲೇಶಪುರ: ಎತ್ತಿನಹೊಳೆ ಯೋಜನೆಗಾಗಿ ವಶಪಡಿಸಿಕೊಂಡಿರುವ ಭೂಮಿಗೆ ಕೂಡಲೇ ಪರಿಹಾರ ನೀಡುವಂತೆ ಆಗ್ರಹಿಸಿ ಬೆಳಗೋಡು ಹೋಬಳಿಯ ಸಂತ್ರಸ್ತರು ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಎತ್ತಿನಹೊಳೆ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ಬೆಳಗೋಡು ಹೋಬಳಿ ಹೆಬ್ಬನಹಳ್ಳಿ ಗ್ರಾಮದಲ್ಲಿ ಸೇರಿದ ಬೆಳಗೋಡು, ಹೆಬ್ಬನಹಳ್ಳಿ, ಶಿಡಿಗಳಲೆ, ಮೂಗಲಿ, ಲಕ್ಕುಂದ, ಕಟ್ಟೆಪುರ, ದೀಣೆಕೆರೆ, ಕೂಡನಹಳ್ಳಿ , ಮಾಸವಳ್ಳಿ ಮತ್ತಿತರ ಗ್ರಾಮಗಳ ಗ್ರಾಮಸ್ಥರು ದಲಿತ ಸಂಘರ್ಷ ಸಮಿತಿ (ಭೀಮವಾದ) ನೇತೃತ್ವದಲ್ಲಿ ಎತ್ತಿನಹೊಳೆ ಕಾಮಗಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರಿಗೆ ಅನ್ಯಾಯ: ಬೆಳಗೋಡು ಹೋಬಳಿಯ ರೈತರನ್ನು ಮೂಲಭೂತ ಸೌಲಭ್ಯಗಳಿಂದ ವಂಚಿತರನ್ನಾಗಿಸಲಾಗಿದೆ. ಮೂಲ ಸೌಕರ್ಯಗಳನ್ನು ಕಲ್ಪಿಸದೇ ಇಷ್ಟ ಬಂದಂತೆ ಕಾಮಗಾರಿ ನಡೆಸಲಾಗುತ್ತಿದೆ. ದಲಿತರು ಕೆಲವೇ ಗುಂಟೆ ಜಮೀನನ್ನು ಹೊಂದಿದ್ದಾರೆ. ಅವರಿಗೆ ಕಾನೂನು ಬದ್ಧವಾಗಿ ಸಿಗಬೇಕಾದ ಪರಿಹಾರವನ್ನು ಕಲ್ಪಿಸಲಾಗಿಲ್ಲ. ಪರಿಹಾರಕ್ಕಾಗಿ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದಲಿತರು ಹಾಗೂ ಅಮಾಯಕ ರೈತರ ಮೇಲೆ ದಬ್ಟಾಳಿಕೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ಸ್ಫೋಟಕಗಳಿಂದ ಮನೆ ಬಿರುಕು: ಗ್ರಾಮದಲ್ಲಿ ಬಂಡೆಗಳನ್ನು ಸ್ಫೋಟಿಸಲು ಸ್ಫೋಟಕಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಹಲವು ಮನೆಗಳಿಗೆ ಬಿರುಕು ಉಂಟಾಗಿದೆ. ಹೆಬ್ಬನಹಳ್ಳಿ ಗ್ರಾಮದ ಸರ್ವೆ ನಂ 86ರಲ್ಲಿ ಒಟ್ಟು 12 ಪರಿಶಿಷ್ಟ ಜಾತಿಗೆ ಸೇರಿದ ಫಲಾನುಭವಿಗಳಿಗೆ 1984-85 ರಲ್ಲಿ ಅಂದಿನ ಉಪವಿಭಾಗಾಧಿಕಾರಿಗಳು ಜಮೀನು ಮಂಜೂರು ಮಾಡಿದ್ದಾರೆ. ಆದರೆ ವಿನಾಕಾರಣ ಈ ಕುಟುಂಬಗಳಿಗೂ ಸಹ ಪರಿಹಾರ ನೀಡದೇ ಕೇವಲ ಗುಡ್‌ವಿಲ್ ಹಣ ನೀಡಿ ಸತಾಯಿಸಲಾಗುತ್ತಿದೆ.
ತಾಲೂಕು ಕಚೇರಿಯಲ್ಲಿ ಮೂಲ ದಾಖಲಾತಿಗಳನ್ನು ಪಡೆಯಲು ವಿಳಂಬವಾಗುತ್ತಿದ್ದು ಕೂಡಲೇ ಪ್ರತಿಯೊಬ್ಬ ಸಂತ್ರಸ್ತರಿಗೂ ಪರಿಹಾರ ನೀಡಬೇಕು ಅಲ್ಲಿಯವರೆಗೂ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನಕಾರರು ಧರಣಿ ಕುಳಿತರು. ಈ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಆಲಿಸಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ನಾಗರಾಜ್ ಹೆತ್ತೂರು, ಬೆಳಗೋಡು ಬಸವರಾಜು, ರೇಣುಕಾ ಹೇರೂರು, ರವೀಶ್ ಬೆಳಗೋಡು, ತಿರುಮಲ ಗೋವಿಂದು, ಕುಮಾರ್ ಕೂಡನಹಳ್ಳಿ, ಮಂಜಯ್ಯ ಮತ್ತಿತರರು ಹಾಜರಿದ್ದರು.