Advertisement

ಯುವತಿ ಅತ್ಯಾಚಾರ-ಹತ್ಯೆ: ಹೆಚ್ಚಿದ ಆಕ್ರೋಶ

04:13 PM Oct 06, 2020 | Suhan S |

ರಾಯಚೂರು: ಉತ್ತರ ಪ್ರದೇಶದ ಹತ್ರಾಸ್‌ ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳು ಸೋಮವಾರ ಪ್ರತ್ಯೇಕ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರ ಹಾಕಿದವು.

Advertisement

ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಪರಿಶಿಷ್ಟ ಪಂಗಡ ವಿಭಾಗದ ಕಾರ್ಯಕರ್ತರು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಉತ್ತರ ಪ್ರದೇಶದಲ್ಲಿ ಅರಾಜಕತೆ ಹೆಚ್ಚಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆಇಲ್ಲದಾಗಿದೆ. ಹೀಗಾಗಿ ಕೂಡಲೇ ಅವರನ್ನು  ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿ, ದಲಿತ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷ ನರಸಿಂಹ ನಾಯಕ, ಉಪಾಧ್ಯಕ್ಷ ತಾಯಣ್ಣ ನಾಯಕ ಸೇರಿ ಇತರರಿದ್ದರು.

ಎಸ್‌ಯುಸಿಐ ಪ್ರತಿಭಟನೆ: ಯುವತಿ ಮೇಲೆ ಅತ್ಯಾಚಾರ ಘಟನೆ ಖಂಡಿಸಿ ಸೋಷಿಯಲ್‌ ಯೂನಿಟ್‌ ಸೆಂಟರ್‌ ಆಫ್‌ ಇಂಡಿಯಾ ಕಾರ್ಯಕರ್ತರು ಡಿಸಿ ಕಚೇರಿ ಎದುರಿನ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು. ಯುವತಿ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೇ, ಮನಸೋ ಇಚ್ಛೆ ಥಳಿಸಿದ್ದಾರೆ. ಇದರಿಂದ ಯುವತಿ ಮೃತಪಟ್ಟಿದ್ದಾಳೆ. ಇದೊಂದು ಹೇಯ ಕೃತ್ಯವಾಗಿದೆ. ತಪ್ಪಿತಸ್ಥರನ್ನು ಕೂಡಲೇ ಬಂ ಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ದೇಶದಲ್ಲಿ ಡ್ರಗ್ಸ್‌, ಅಶ್ಲೀಲ ಜಾಲವನ್ನು ಸಂಪೂರ್ಣ ನಿರ್ನಾಮ ಮಾಡಬೇಕು. ಸಂತ್ರಸ್ತ ಯುವತಿ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಮಿತಿ ಸದಸ್ಯರಾದ ವೀರೇಶ ಎನ್‌. ಎಸ್‌., ಚನ್ನಬಸವ ಜಾನೇಕಲ್‌, ಮಹೇಶ, ಮಲ್ಲನಗೌಡ, ಕಾರ್ತಿಕ ಇತರರಿದ್ದರು. ಸರ್ಕಾರಿ ನೌಕರರ ಸಂಘ: ಯುವತಿಯನ್ನು ಅತ್ಯಾಚಾರಗೈದ ದುಷ್ಕರ್ಮಿಗಳ ವಿರುದ್ಧಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ನೌಕರರ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

Advertisement

ದೇಶದಲ್ಲಿ ದಲಿತ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ಸರ್ಕಾರ ಈವರೆಗೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ. ತೆಲಂಗಾಣದಲ್ಲಿ ಇಂಥದ್ದೇ ಘಟನೆ ನಡೆದಾಗ ಅಲ್ಲಿನ ಸರ್ಕಾರ ದಿಟ್ಟ ಕ್ರಮಕೈಗೊಂಡಿತ್ತು. ಅಂಥ ನಿರ್ಧಾರವನ್ನು ಉತ್ತರ ಪ್ರದೇಶ ಸರ್ಕಾರ ಕೂಡ ಕೈಗೊಳ್ಳಬೇಕು. ಕೂಡಲೇ ಅತ್ಯಚಾರಿಗಳನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಸಬೇಕೆಂದು ಆಗ್ರಹಿಸಿದರು.

ಸಂಘಟನೆ ಗೌರವಾಧ್ಯಕ್ಷ ಡಾ| ಪ್ರಭು ಹುಲಿನಾಯಕ, ಗುಲ್ಬರ್ಗ ವಿಭಾಗ ಅಧ್ಯಕ್ಷ ಗುರುನಾಥ ಹುಲಿಕಲ್‌, ಜಿಲ್ಲಾಧ್ಯಕ್ಷ ಯಲ್ಲಪ್ಪ ಜಾಲಿಬೆಂಚಿ, ಗೋಪಾಲ ನಾಯಲ, ತಿಮ್ಮಪ್ಪ ನಾಯಕ ಸೇರಿದಂತೆ ಅನೇಕರಿದ್ದರು.

ಪ್ರದೇಶ ಯುವ ಕುರುಬರ ಸಂಘ: ಯುವತಿ ಅತ್ಯಾಚಾರ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿ ಸಬೇಕು ಎಂದು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಸದಸ್ಯರು ಪ್ರತಿಭಟಿಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.

ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಲೆಕ್ಕಸದೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಗುರುಪ್ರತಾಪ್‌, ಜಿಲ್ಲಾ ಉಪಾಧ್ಯಕ್ಷ ಅಯ್ಯಪ್ಪ ಗಬ್ಬೂರು, ತಿಮ್ಮಪ್ಪ ಮರ್ಚೆಟಾಳ, ರಮೇಶ ಮೂಡಲದಿನ್ನಿ ಸೇರಿದಂತೆ ಇತರರಿದ್ದರು.

ಅಂಗನವಾಡಿ ನೌಕರರ ಸಂಘ: ದಲಿತರಿಗೆ, ಮಹಿಳೆಯರಿಗೆ ರಕ್ಷಣೆ ನೀಡದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು), ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ, ದಲಿತ ಹಕ್ಕುಗಳಸಮಿತಿ ಹಾಗೂ ಭಾರತ ಕಮ್ಯುನಿಸ್ಟ್‌ ಪಕ್ಷದ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಡಿಸಿ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದ ಪ್ರತಿಭಟನಾಕಾರರು ಬಳಿಕ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಸಂಘಟನೆ ಮುಖಂಡರಾದ ಎಚ್‌ .ಪದ್ಮಾ, ಜೆ.ತಾಯಮ್ಮ, ಕೆ.ಜಿ.ವೀರೇಶ, ಪದ್ಮಾ, ಸತ್ಯಪ್ಪ, ರಸೂಲ್‌, ಗೋಕರಮ್ಮ ಸೇರಿದಂತೆ ಅನೇಕರಿದ್ದರು.

ದಸಂಸ (ನಾಗವಾರ ಬಣ): ದಲಿತ ಯುವತಿ ಮೇಲಿನ ಅತ್ಯಾಚಾರ ಘಟನೆ ಖಂಡಿಸಿ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು. ಇದೇ ವಿಚಾರವಾಗಿ ಕರ್ನಾಟಕ ದಲಿತ ಮಹಿಳಾ ಮುಖಂಡರ ವೇದಿಕೆಯಿಂದ ಕೂಡ ಪ್ರತಿಭಟನೆ ನಡೆಸಲಾಯಿತು.

ಡಿಸಿಗೆ ಮನವಿ ಸಲ್ಲಿಸಿದ ಸಂಘಟನೆ ಸದಸ್ಯರು, ಉತ್ತರ ಪ್ರದೇಶ ಸರ್ಕಾರ ವಜಾಗೊಳಿಸಬೇಕು, ಪತ್ರಕರ್ತರಿಗೆ, ಹೋರಾಟಗಾರರಿಗೆ ಭದ್ರತೆ ನೀಡಬೇಕು. ತಪ್ಪಿತಸ್ಥರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next