Advertisement

ಭೂಮಿಗೆ ಅವೈಜ್ಞಾನಿಕ ಬೆಲೆ ನಿಗದಿ ವಿರುದ್ಧ ಪ್ರತಿಭಟನೆ

12:57 PM Nov 15, 2018 | |

ಗೌರಿಬಿದನೂರು: ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ನ್ಯಾಯಯುತ ಬೆಲೆ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ವಿವಿಧ ಭಾಗದ ರೈತರು ವಿದ್ಯುತ್‌ ಟವರ್‌ ಕಾಮಗಾರಿ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದರು. ಈ ವೇಳೆ ಪೊಲೀಸರಿಂದ ಪ್ರತಿ ಭಟನಾಕಾರರನ್ನು ಬಂಧನದ ಘಟನೆ ಮೇಳ್ಯ ಗ್ರಾಮದಲ್ಲಿ ನಡೆಯಿತು.

Advertisement

ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಹಾಗೂ ಬಾಗೇಪಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ಪವರ್‌ಗ್ರಿಡ್‌ ಕಂಪನಿ ಪಾವಗಡ ತಾಲೂಕಿನ ತಿರುಮಣಿಯಲ್ಲಿ ಉತ್ಪಾದಿಸುತ್ತಿರುವ ವಿದ್ಯುತ್‌ ದೇವನ ಹಳ್ಳಿ ಬಳಿಗೆ ಸರಬರಾಜು ಮಾಡಲು ರೈತರ ಜಮೀನು ಸ್ವಾಧೀನ ಮಾಡಿ ಕೊಂಡಿದ್ದು, ಪರಿಹಾರವಾಗಿ ರೈತರಿಗೆ ಚ.ಮೀಗೆ ಕೇವಲ 800 ರೂ. ನಿಗದಿ ಮಾಡಿದೆ. ಅದು ಅವೈಜ್ಞಾನಿಕವಾಗಿದೆ. ಈ ಹಿಂದಿನ ಜಿಲ್ಲಾಧಿಕಾರಿಗಳು 3600 ರೂ.ಗಳನ್ನು ನಿಗದಿ ಮಾಡದ್ದರು. ಈ ಪ್ರದೇಶದ ಚ.ಮೀಗೆ ಕನಿಷ್ಠ 4000 ರೂ. ಗಳನ್ನು ನಿಗದಿ ಮಾಡಬೇಕು ಎಂದರು.

ಕ್ರಮಕ್ಕೆ ಸಚಿವರೊಂದಿಗೆ ಚರ್ಚೆ: ಡೀಸಿ ನಿಗದಿ ಮಾಡಿರುವ ಬೆಲೆ ಅವೈಜ್ಞಾನಿಕ ವಾಗಿದೆ. ಸಮರ್ಪಕ ಬೆಲೆ ನಿಗದಿಗೆ ಕ್ರಮ
ಕೈಗೊಳ್ಳಬೇಕು ಎಂದು ಸಚಿವ ಶಿವ ಶಂಕರರಡ್ಡಿ ಅವರೊಂದಿಗೆ ಚರ್ಚಿಸ ಲಾಗಿದೆ. ಅವರು ಡೀಸಿಯೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದರು. ಆದರೆ ರೈತರು ಈ ಸಂಬಂಧ ನ್ಯಾಯಾಲಯಕ್ಕೆ ಹೋಗಿ ಎಂಬ ಹೇಳಿಕೆ ಸರಿಯಲ್ಲ. ರೈತರ ಸಮಸ್ಯೆಗೆ ಸ್ಪಂದಿಸುವ ಜವಾಬ್ದಾರಿ ಜನಪ್ರತಿನಿಧಿಗಳಿಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ವೀರಪ್ಪ ಮೋಯ್ಲಿ ಈ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ. ಅವರು ಜನರಿಗೆ ಸಿಗುತ್ತಲೇ ಇಲ್ಲ ಎಂದರು. 

ನ್ಯಾಯಯುತ ಹೋರಾಟಕ್ಕೆ ತಡೆ: ನ್ಯಾಯಯುತವಾಗಿ ಭೂಮಿಯನ್ನು ಕಳೆದುಕೊಂಡ ರೈತರ ಪರವಾಗಿ ಹೋರಾಟ ಮಾಡಲು ಪೊಲೀಸ್‌ ಇಲಾಖೆ ಅನುಮತಿ ನೀಡುವುದಿಲ್ಲ. ಪ್ರತಿಭಟನೆ ಮಾಡಬಾರದು ಎಂದು ಪೊಲೀಸ್‌ ಇಲಾಖೆ ನೋಟಿಸ್‌ ನೀಡಿದ್ದಾರೆ. ದೇಶದಲ್ಲಿ ಹೋರಾಟಕ್ಕೂ ಅನುಮತಿ ಪಡೆಯುವಂತಹ ಪರಿಸ್ಥಿತಿ ಬಂದಿಲ್ಲ. ಪೊಲೀಸರು ಕಂಪನಿಗಳ ಪರವಾಗಿದ್ದಾರೆ ಎಂದು ತಿಳಿಸಿದರು. 

ಅನ್ಯಾಯದ ವಿರುದ್ಧ ಹೋರಾಟ ಅನಿವಾರ್ಯ: ಮುಖಂಡ ಎಂ.ಆರ್‌. ಲಕ್ಷ್ಮೀನಾರಾಯಣ ಮಾತನಾಡಿ, ರೈತರ ಭೂಮಿಗೆ ಒಂದೂವರೆ ಪಟ್ಟು ಬೆಲೆ ಕೊಡಬೇಕು. ರೈತರ ಜಮೀನಿನಲ್ಲಿ ವಿದ್ಯುತ್‌ ಲೈನ್‌ ಸ್ಥಾಪಿಸಲು ಮಾರುಕಟ್ಟೆ ಬೆಲೆಗಿಂತ ಮೂರು ಪಟ್ಟು ಹೆಚ್ಚಿನ ಬೆಲೆ ನೀಡಬೇಕು. ಜಿಲ್ಲಾಧಿಕಾರಿಗಳಿಗೆ ಬೆಲೆ ನಿಗದಿ ಮಾಡುವ ಅಧಿಕಾರವಿದೆ. ಆದರೂ ಅವರು ಜಮೀನಿಗೆ ಬೆಲೆ ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಇದರ ವಿರುದ್ಧ ಅನಿವಾರ್ಯವಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

Advertisement

ಡೀಸಿಗೆ ಪ್ರತಿಭಟನೆ ವರದಿ ಸಲ್ಲಿಕೆ: ತಹಶೀಲ್ದಾರ್‌ ಶ್ರೀನಿವಾಸ್‌ ಮಾತನಾಡಿ, ಡೀಸಿ ಕಾನೂನು ರೀತಿಯಲ್ಲಿ ಬೆಲೆ ನಿಗದಿ ಮಾಡಿದ್ದಾರೆ. ಆದರೆ ರೈತರು ಹೆಚ್ಚಿನ ಬೆಲೆ ನಿಗದಿ ಮಾಡುವಂತೆ ಧರಣಿ ಮಾಡುತ್ತಿದ್ದಾರೆ. ಕಾನೂನು ಮತ್ತು ಕಾಮಗಾರಿಗೆ ಅಡ್ಡಿಪಡಿಸ ಬಾರದು ಎಂಬ ಕಾರಣಕ್ಕೆ ರೈತರನ್ನು ಬಂಧಿಸಲಾಗಿದೆ ಎಂದು ಡೀಸಿಗೆ ವರದಿ ಸಲ್ಲಿಸಲಾಗುವುದು ಎಂದರು. ಪ್ರಾಂತ ರೈತ ಸಂಘದ
ತಾಲೂಕು ಅಧ್ಯಕ್ಷ ರವಿಚಂದ್ರಾ ರೆಡ್ಡಿ, ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್‌ ಗೌಡ, ಮುಂಖಡರಾದ ಸಿ.ಸಿ.ಅಶ್ವತ್ಥಪ್ಪ, ರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next