Advertisement

ತ್ರಿಶೂಲ ಹಿಡಿದು ಪ್ರತಿಭಟನೆ: ಮುಬೀನ್‌ ತಾಜ್‌ ಸೆರೆ

08:40 AM Sep 07, 2017 | Team Udayavani |

ಮಡಿಕೇರಿ:ತಾನು ನಡೆಸುತ್ತಿರುವ ಶಾಲೆ ಆವರಣದ ಕೊಠಡಿಯಲ್ಲಿ ಪುರಾತನ ಕಾಲದ ದೇವಿ ವಿಗ್ರಹ ಇದ್ದು ಅದನ್ನು ಭೂಮಿಯಿಂದ ಮೇಲೆತ್ತಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಶಾಲೆಯ ಮುಖ್ಯಸ್ಥರಾದ ಮುಬೀನ್‌ ತಾಜ್‌ ಕುಶಾಲನಗರ ಪಟ್ಟಣ ಪಂಚಾಯತ್‌ ಕಚೇರಿಯ ಆವರಣದಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

Advertisement

ಕೈಯಲ್ಲಿ ತ್ರಿಶೂಲ ಹಿಡಿದು ಪಟ್ಟಣ ಪಂಚಾಯತ್‌ಮುಂಭಾಗ ನಿಂತುಕೊಂಡು ಮಹಾಕಾಳಿ ದೇವತೆಗೆ ತನ್ನ ಜಾಗವನ್ನು ಬಿಟ್ಟುಕೊಡುವಂತೆ ಒತ್ತಾಯಿಸುತ್ತಿದ್ದ ದೃಶ್ಯ ಗೋಚರಿಸಿತು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್‌ ಮತ್ತು ಉಪತಹಸೀಲ್ದಾರ್‌ ನಂದಕುಮಾರ್‌ ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರೂ ಇದಕ್ಕೆ ಒಪ್ಪದ ಮುಬೀನ್‌ ತಾಜ್‌, ನನಗೆ ತತ್‌ಕ್ಷಣ ದೇವರ ವಿಗ್ರಹ ಮೇಲೆತ್ತಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದರು.

ಪಂಚಾಯತ್‌ ಮುಖ್ಯಾಧಿಕಾರಿ ಪೊಲೀಸ್‌ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸರು ಮುಬೀನ್‌ ತಾಜ್‌ ಅನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದು ಪ್ರಕರಣಕ್ಕೆ ಇತಿಶ್ರೀ ಹಾಡಿದರು.

ತಮ್ಮ ಭೂಮಿಯನ್ನು ಕಬಳಿಸುವ ಹುನ್ನಾರ ಇದಾಗಿದೆ ಎಂದು ಕಟ್ಟಡದ ಮಾಲಕರಾದ ನಳಿನಿ ಶೇಷಾದ್ರಿ ಮತ್ತು ಪುತ್ರ ಅನಿಲ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ. 

ವಿಗ್ರಹ ಇಲ್ಲ: ಜಾಗದ ಮಾಲಕರ ಸ್ಪಷ್ಟನೆ
ತಮ್ಮ ಜಾಗದ ಆವರಣದಲ್ಲಿ ಯಾವುದೇ ರೀತಿಯ ದೇವರ ವಿಗ್ರಹ ಇರುವುದಿಲ್ಲ ಎಂದು ಪ್ರತಿಕ್ರಿಯಿಸಿರುವ ಅವರು, ಮುಬೀನ್‌ ತಾಜ್‌ ಎಂಬವರು ಕಳೆದ 7 ವರ್ಷಗಳ ಹಿಂದೆ ತಮಗೆ ಸೇರಿದ ಕಟ್ಟಡದಲ್ಲಿ ಶಾಲೆ ನಡೆಸಲು ಬಾಡಿಗೆಗಿದ್ದು ಅನಾವಶ್ಯಕ ಜನರಲ್ಲಿ ಗೊಂದಲ ಉಂಟುಮಾಡುವ ಕೆಲಸದಲ್ಲಿ ತೊಡಗಿರುವುದು ಬೇಸರ ತಂದಿದೆ ಎಂದಿದ್ದಾರೆ. ಕಳೆದ ಕೆಲವು ಸಮಯದಿಂದ ಮುಬೀನ್‌ ತಾಜ್‌ ಅವರು ದೇವರ ವಿಗ್ರಹ ಇರುವುದಾಗಿ ತಕರಾರು ಎತ್ತಿರುವ ಸಂಬಂಧ ತಾವು ಅಷ್ಟಮಂಗಲ ಪ್ರಶ್ನೆ ಮೂಲಕ ಸತ್ಯಾಸತ್ಯತೆ ಬಗ್ಗೆ ಅರಿಯಲು ಪ್ರಯತ್ನಿಸಿರುವುದಾಗಿಯೂ ನಳಿನಿ ಶೇಷಾದ್ರಿ ಅವರು ಹೇಳಿದರು.

Advertisement

1977ರಲ್ಲಿ ತಮ್ಮ ಪತಿ ಸಿಪಿಎಡ್‌ ಕಾಲೇಜು ತರಗತಿಗಳನ್ನು ನಡೆಸಲು ಜಾಗ ಖರೀದಿಸಿದ್ದು ಅನಂತರದ ದಿನಗಳಲ್ಲಿ ಈ ಆವರಣದ ಕೆಲವು ಕಟ್ಟಡಗಳನ್ನು ಬಾಡಿಗೆ ಒಪ್ಪಂದದಲ್ಲಿ ನೀಡಲಾಗಿದೆ ಎಂದು ಮಾಹಿತಿ ಒದಗಿಸಿದರು.

ಕಳೆದ 3 ವರ್ಷಗಳಿಂದ ಒಪ್ಪಂದದಂತೆ ಬಾಡಿಗೆ ನೀಡುತ್ತಿಲ್ಲ. ಪ್ರಸಕ್ತ ಬಾಡಿಗೆ ಕರಾರು ಮುಗಿದಿದ್ದು ಅವರನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಈ ಸಂಬಂಧ ಪೊಲೀಸ್‌ ಪುಕಾರು ನೀಡಲು ಚಿಂತಿಸಲಾಗಿದೆ ಎಂದು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next