Advertisement

ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

01:30 PM Feb 28, 2017 | Team Udayavani |

ಹೊನ್ನಾಳಿ: ರಾಜ್ಯ ಸರ್ಕಾರ ಮತ್ತು ತಾಲೂಕು ಆಡಳಿತದ ನಿಷ್ಕ್ರಿಯ, ಭ್ರಷ್ಟಾಚಾರದ ವಿರುದ್ಧ, ಸಮರ್ಪಕವಾಗಿ ಆಶ್ರಯ ಮನೆ ಮತ್ತು ಶೌಚಾಲಯಗಳಿಗೆ ಮರಳು ಒದಗಿಸುವುದು, ಪಡಿತರ ಕೂಪನ್‌ ಪದ್ಧತಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಾಲೂಕು ಬಿಜೆಪಿ ವತಿಯಿಂದ ಸೋಮವಾರ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 

Advertisement

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತು ತಾಲೂಕು ಬಿಜೆಪಿ ಅಧ್ಯಕ್ಷ ಡಿ.ಜಿ.ರಾಜಪ್ಪ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ನಿಲ್ದಾಣದ ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ತಾಲೂಕು ಕಚೇರಿಯ ಬಳಿ ಬೃಹತ್‌ ಪ್ರತಿಭಟನಾ ಸಭೆ ನಡೆಸಲಾಯಿತು. 

ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ರಾಜ್ಯದಲ್ಲಿ ಕಳೆದ 4 ವರ್ಷಗಳಿಂದ ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಮತ್ತು ತಾಲೂಕು ಆಡಳಿತ ಜನ ವಿರೋಧಿ ಹಾಗೂ ರೈತ ವಿರೋಧಿ ಆಡಳಿತ ನಡೆಸುತ್ತಿದ್ದು, ರಾಜ್ಯದ ಜನತೆಯ ಹಿತರಕ್ಷಣೆಯ ಕಡೆ ಗಮನ ನೀಡುತ್ತಿಲ್ಲ. 

ತಾಲೂಕಿನಲ್ಲಿ ಈವರೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೇ ತಾಲೂಕಿನ ಆಡಳಿತ ದಿಕ್ಕೆಟ್ಟು ಹೋಗಿದೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಆರೋಪಿಸಿದರು. ಭೀಕರ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆಯಾಗಿದ್ದರೂ ಈವರೆಗೂ ಸಮರ್ಪಕವಾಗಿ ಬರ ಕಾಮಗಾರಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗದೇ ತಾಲೂಕು ಆಡಳಿತ ಸಂಪೂರ್ಣ ನಿಷ್ಕಿೃಯವಾಗಿದೆ. 

ರೈತವರ್ಗ, ಕೂಲಿಕಾರ್ಮಿಕರು, ದಿನ ನಿತ್ಯದ ಕೂಲಿಯಿಲ್ಲದೇ ಜೀವನ ನಡೆಸುವುದು ಕಷ್ಟವಾಗಿ ಗೂಳೆ ಹೋಗುತ್ತಿದ್ದಾರೆ. ಅಕ್ರಮ ಮರಳು ದಂಧೆ ಹಗಲು ರಾತ್ರಿ ಎಗ್ಗಿಲ್ಲದೇ ನಡೆಯುತ್ತಿದೆ. ಅಕ್ರಮ ಮರಳು ಲೂಟಿಕೋರರಿಗೆ ಹೇಗೆ ಸಿಗುತ್ತಿದೆ? ಎಂಬುದೇ ಯಕ್ಷ ಪ್ರಶ್ನೆಯಾಗಿದೇ ಶಾಸಕರು ಜೊತೆಗೆ ಹಿಂಬಾಲಕರಿಗೆ ತಾಲೂಕಿನಲ್ಲಿ ಮರಳು ಮೀಸಲಾಗಿದೆ.

Advertisement

ಇಲ್ಲಿಂದ ಹೊರ ಜಿಲ್ಲೆಗಳಿಗೆ ರಾತ್ರೋರಾತ್ರಿ ಹತ್ತಾರು ಲಾರಿಗಳಲ್ಲಿ ಮರಳು ಲೂಟಿಯಾಗುತ್ತಿದೆ ಎಂದು ಆರೋಪಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಡಿ.ಜಿ.ರಾಜಪ್ಪ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ಆಡಳಿತದ ಬಗ್ಗೆ ರಾಜ್ಯದ ಜನತೆ ದಿನ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಯಾವ ಇಲಾಖೆಯ ಅಧಿಕಾರಿಗಳು ಸಾರ್ವಜನಿಕ ಕೆಲಸದ ಕಡೆ ಗಮನ ನೀಡುತ್ತಿಲ್ಲ.

ಜಿಪಂ, ತಾಪಂ, ಗ್ರಾಪಂ ಸದಸ್ಯರ ಮಾತಿಗೆ ಬೆಲೆ ಕೊಡದೆ ತಾಲೂಕು ಆಡಳಿತದ ಜೊತೆ ಶಾಮಿಲಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದರು. ಜಿಪಂ ಸದಸ್ಯರಾದ ದೀಪಾ ಜಗದೀಶ್‌, ಎಂ.ಆರ್‌.ಮಹೇಶ್‌, ಸಿ.ಸುರೇಂದ್ರನಾಯ, ತಾಪಂ ಉಪಾಧ್ಯಕ್ಷ ಸಿದ್ದಲಿಂಗಪ್ಪ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಾಂತರಾಜ್‌ಪಾಟೀಲ್‌, ತಾಲೂಕು ರೈತ ಮೋರ್ಚಾ ಅಧ್ಯಕ್ಷ ರವೀಂದ್ರನಾಥ್‌, ಯುವ ಮೋರ್ಚಾ ಅಧ್ಯಕ್ಷ ಸಿ.ಆರ್‌.ಶಿವಾನಂದ್‌, 

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಭು ಹೊನ್ನಾಳಿ, ಕಾರ್ಯದರ್ಶಿ ಮಂಜುನಾಥ್‌, ಯುವ ಮೋರ್ಚಾ ಉಪಾಧ್ಯಕ್ಷ ಎಂ.ಮಂಜುನಾಥ್‌, ಪಪಂ ಸದಸ್ಯರಾದ ಹೊಸಕೇರಿ ಸುರೇಶ್‌, ಸರಳಿನಮನೆ ಮಂಜುನಾಥ್‌,  ಗುಲಾರಖಾನಂ ತಾಲೂಕು ಬಿಜೆಪಿ ಉಪಾಧ್ಯಕ್ಷ ಕೆ.ಪಿ. ಮುರಾರಿ, ಸಿದ್ದನಗೌಡ, ಎಸ್‌.ಟಿ. ಮೋರ್ಚಾ ಅಧ್ಯಕ್ಷ ವೀರಪ್ಪ, ಎಸ್ಸಿ ಮೋರ್ಚಾ ಅಧ್ಯಕ್ಷ ಮಾರುತಿ, ಒಬಿಸಿ ಮೋರ್ಚಾ ಅಧ್ಯಕ್ಷ ಕನಕದಾಸ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಇರ್ಷಾದ್‌ಖಾನ್‌, ಸ್ಲಂ ಮೋರ್ಚಾ ಅಧ್ಯಕ್ಷ ರಂಗಪ್ಪ ಉಪಸ್ಥಿತರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next