ದಾವಣಗೆರೆ: ಜಮ್ಮು ಮತ್ತು ಕಾಶ್ಮೀರದ ಫೂಂಛ್ ಜಿಲ್ಲೆಯ ಕೃಷ್ಣಘಾಟಿ ವಲಯದಲ್ಲಿ ಇಬ್ಬರು ಭಾರತೀಯ ಸೈನಿಕರ ಶಿರಚ್ಛೇದ ಮಾಡಿರುವ ಪಾಕಿಸ್ತಾನದ ಪಾಶವೀ ಕೃತ್ಯ ಖಂಡಿಸಿ ಮಂಗಳವಾರ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಫೂಂಛ್ ಜಿಲ್ಲೆಯ ಕೃಷ್ಣಘಾಟಿ ವಲಯದಲ್ಲಿ ನೆಲಬಾಂಬ್ ಪರಿಶೀಲನೆ ನಡೆಸುತ್ತಿದ್ದ ಸೈನಿಕರ ಮೇಲೆ ಏಕಾಏಕಿ ದಾಳಿ ನಡೆಸಿದ ಪಾಕಿಸ್ತಾನಿ ಸೈನಿಕರು ಇಬ್ಬರು ಯೋಧರನ್ನು ಕೊಂದು ಶಿರಚ್ಛೇದದ ಜೊತೆಗೆ ಇತರೆ ಅಂಗಾಂಗಳ ಛೇದ ಮಾಡಿರುವುದು ಅತ್ಯುಗ್ರ ಖಂಡನೀಯ ಕೃತ್ಯ.
ಭಾರತೀಯ ಸೇನೆ ಪಾಕಿಸ್ತಾನದ ಪಾಶವೀ ಕೃತ್ಯಕ್ಕೆ ತಕ್ಕ ಉತ್ತರ ನೀಡಬೇಕು. ಮುಂದೆ ಎಂದೆಂದೂ ಭಾರತದ ತಂಟೆಗೆ ಬರದಂತೆ ದಾಳಿ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕಾಶ್ಮೀರದಲ್ಲಿ ಪ್ರತ್ಯೇಕತವಾದಿಗಳು ಭಾರತೀಯ ಸೈನಿಕರ ಮೇಲೆ ಕಲ್ಲಿನ ದಾಳಿ ನಡೆಸುತ್ತಿದ್ದಾರೆ.
ಇಂತಹ ಕುಕೃತ್ಯ ತಡೆಯುವ ನಿಟ್ಟಿನಲ್ಲಿ ಭಾರತೀಯ ಸೇನೆಗೆ ಪೂರ್ಣಾಧಿಕಾರ ಕೊಡಬೇಕು. ನಮ್ಮ ದೇಶದಲ್ಲೇ ಇದ್ದುಕೊಂಡು ನೆರೆಯ ಪಾಕಿಸ್ತಾನಕ್ಕೆ ಬೆಂಬಲ ನೀಡುವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ದೇಶದ್ರೋಹ ಪ್ರಕರಣ ದಾಖಲಿಸಿ, ಗಲ್ಲುಶಿಕ್ಷೆಗೆ ಒಳಪಡಿಸಬೇಕು.
ಸರ್ಕಾರ ಸೈನಿಕರಿಗೆ ಹೆಚ್ಚಿನ ನೈತಿಕ ಸ್ಥೈರ್ಯ, ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು. ಕಾಶ್ಮೀರದಲ್ಲಿ ಪಾಕಿಸ್ತಾನದ ಬಾಹ್ಯ ಹಸ್ತಕ್ಷೇಪವನ್ನ ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಇಡೀ ಕಾಶ್ಮೀರದಲ್ಲಿ ಪ್ರಾದೇಶಿಕ ತುರ್ತು ಪರಿಸ್ಥಿತಿ ಹೇರಬೇಕು.
ಪ್ರತ್ಯೇಕತವಾದಿಗಳ ವಿರುದ್ಧ ಕಠಿಣಾತಿಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು. ರಾಜು, ಪ್ರಹ್ಲಾದ ತೇಲ್ಕರ್, ಪರಶುರಾಮ್ ನಡುಮನಿ, ಮಲ್ಲಿಕಾರ್ಜುನಪ್ಪ ಇತರರು ಇದ್ದರು.