Advertisement

ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

06:44 AM May 15, 2020 | Lakshmi GovindaRaj |

ದೇವನಹಳ್ಳಿ: ಎಪಿಎಂಸಿ ಕಾಯ್ದೆಯನ್ನು ಹೊಸದಾಗಿ ತಿದ್ದುಪಡಿಗೊಳಿಸಲು ಹೊರಟಿರುವ ಸರ್ಕಾರದ ಕ್ರಮ ವಿರೋಧಿಸಿ ಜಿಲ್ಲಾ ಕರ್ನಾಟಕ ರೈತ ಸಂಘದಿಂದ ಜಿಲ್ಲಾಡಳಿತ ಭವನದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಕರ್ನಾಟಕ ರಾಜ್ಯ  ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್‌ ಮಾತನಾಡಿ, ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಬಂಡವಾಳ ಶಾಯಿಗಳು ಹಾಗೂ ಬಹು ರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಲು ರಾಜ್ಯ ಸರ್ಕಾರ  ಮುಂದಾಗಿದೆ.

Advertisement

ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 1926ರಲ್ಲಿ ಬ್ರಿಟಿಷರು ರಾಯಲ್‌ ಕಮ್ಯೂಷನ್‌ ಅಗ್ರಿಕಲ್ಚರ್‌ ಎಂಬ ಆಯೋಗ ರಚಿಸಿ, ಹಲವು ಸಲಹೆ ಪಡೆದು ಕೃಷಿ ಮಾರುಕಟ್ಟೆಗೆ  ಬೇಕಾಗುವ ಕಾನೂನು ಜಾರಿಗೆ ತರಲಾಗಿತ್ತು. 1955ರಿಂದ ವಿವಿಧ ಬದಲಾವಣೆ ತಂದು, ರೈತರ ಕೃಷಿ ಮಾರುಕಟ್ಟೆಯಾಗಿ 11 ಜನ ಸದಸ್ಯರ ಸಮಿತಿ ಹಾಗೂ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳುವ ನೀತಿ ಜಾರಿಗೆ ಬಂದಿತು.

ಈಗ  ದೇಶದಲ್ಲಿ ಸುಸಜ್ಜಿತ ಮಾರುಕಟ್ಟೆಗಳಿವೆ. ಎಲ್ಲಾ ಬೆಳೆಗಳಿಗೂ ಮಾರಕಟ್ಟೆ ಕಲ್ಪಿಸಲಾಗಿದೆ. ಶತಮಾನಗಳ ಹಳೆಯ ಮಾರುಕಟ್ಟೆ ಸುಧಾರಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸಿ ಕೃಷಿಕನಿಗೆ ಸರ್ಕಾರ ಸ್ಪರ್ಧಾತ್ಮಕವಾದ  ಬೆಲೆ ಕೊಡಿಸಲು ಕಾರ್ಯಕ್ರಮ ಜಾರಿಗೆ ತರಬೇಕಾಗಿತ್ತು. ಆದರೆ ಈಗ ಅಂತಾರಾಷ್ಟ್ರೀಯ ವ್ಯಾಪಾರಿಗಳು ದೇಶದ ಕಾಪೋರೇಟ್‌ ಕಂಪನಿಗಳಿಗೆ ಅನುಕೂಲವಾಗುವಂತೆ ಕೃಷಿ ಮಾರುಕಟ್ಟೆಯನ್ನಾಗಿ ಒದಗಿಸಲು ಮಡುತ್ತಿರುವ  ತಿದ್ದುಪಡಿಯೇ ಈ ಹೊಸ ನೀತಿಯಾಗಿದೆ.

ಈ ಹೊಸ ಎಪಿಎಂಸಿ ತಿದ್ದಪಡಿಯನ್ನು ತಮ್ಮ ರಾಜ್ಯ ಸರಕಾರದ ಸಚಿವ ಸಂಪುಟ ತೀರ್ಮಾನ ಮಾಡಿ, ಅದನ್ನು ತಕ್ಷಣವೇ ರಾಜ್ಯಪಾಲರಿಗೆ ಕಳುಹಿಸಬೇಕು ಎಂದು ತಾಕೀತು ಮಾಡಿತ್ತು. ಅದರಂತೆ  ರಾಜ್ಯಸರಕಾರ ತಿದ್ದುಪಡಿಗಳಿಗೆ ತೀರ್ಮಾನಿಸಿ, ರಾಜ್ಯಪಾಲರ ಮುಂದೆ ಹಾಜರುಪಡಿಸಲಾಗಿದೆ. ಕೂಡಲೇ ರಾಜ್ಯ ಪಾಲರು ಸುಗ್ರಿವಾಜ್ಞೆ ಜಾರಿಗೆಯಾಗದಂತೆ ಸಹಿ ಹಾಕಬಾರದು.

ರೈತರಿಗೆ ಶಾಪವಾಗಿರುವ ಈ ಮರಣ ಶಾಸನವನ್ನು ಮುಖ್ಯಮಂತ್ರಿಗಳು ಕಡತ  ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು. ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್‌. ಕೆ.ನಾಯಕ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್‌, ತಾಲೂಕು ರೈತ ಸಂಘದ ಕಾರ್ಯದರ್ಶಿ  ಬಿದಲೂರು ರಮೇಶ್‌, ವಿಜಯಪುರ ಹೋಬಳಿ ಅಧ್ಯಕ್ಷ ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಹನುಮೇಗೌಡ, ಪದಾಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next