ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತನ್ನ ಮೊದಲ ಸಭೆಯಲ್ಲಿ ತಮಿಳುನಾಡು ಪರ ನಿರ್ಣಯ ಕೈಗೊಂಡಿರುವುದನ್ನು ಖಂಡಿಸಿ ಜು.7ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರ ರಚನೆ ಬಳಿಕ ಮೊದಲ ಸಭೆಯಲ್ಲಿಯೇ ತಮಿಳುನಾಡಿಗೆ ಕಾವೇರಿಯಿಂದ 31.24 ಟಿಎಂಸಿ ನೀರು ಬಿಡಲು ಕರ್ನಾಟಕಕ್ಕೆ ಸೂಚಿಸಿದೆ.
ಇನ್ನು ರಾಜ್ಯದಿಂದ ನೀರು ಬಿಡದಿದ್ದರೆ ತಮಿಳುನಾಡಿನವರು ಸುಪ್ರೀಂಕೋರ್ಟ್ ಮೊರೆಹೋಗಿ ಪ್ರತಿಭಟನೆ ನಡೆಸುತ್ತಾರೆ. ಆದರೆ, ಈ ವಿಷಯದ ಬಗ್ಗೆ ನಮ್ಮ ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಪ್ರತಿಪಕ್ಷದ ನಾಯಕರ್ಯಾರು ಅಧಿವೇಶನದಲ್ಲಿ ಚಕಾರವೆತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಧಿಕಾರದ ನಿರ್ಣಯ ಖಂಡಿಸಿ ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳು ಒಟ್ಟಾಗಿ ಇದೇ ಜು.7ರಂದು ಬೆಳಗ್ಗೆ 10 ಗಂಟೆಗೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಜತೆಗೆ ಜು.10ರಂದು ಎಲ್ಲ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿ ರಾಜ್ಯಾದ್ಯಂತ ಬಂದ್ ಮಾಡಲು ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.
ಕಾವೇರಿ ನಿರ್ವಹಣಾ ಪ್ರಾಧಿಕಾರದ ನಿಲುವಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ.ಆದೇಶದ ವಿರುದ್ಧ
ನಿಲ್ಲಬೇಕು ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಒತ್ತಾಯಿಸಲಾಗುವುದು. ಎಲ್ಲಾ ಕನ್ನಡ ಸಂಘಟನೆಗಳು ಜು.10ರಂದು ಸಭೆ ಸೇರಿ, ಚರ್ಚಿಸಿ ರಾಜ್ಯಾದ್ಯಂತ ಪ್ರತಿಭಟಿಸಲಾಗುವುದು.
– ಸಾ.ರಾ.ಗೋವಿಂದು,
ಚಲನಚಿತ್ರ ವಾಣಿಜ್ಯಮಂಡಳಿ ಮಾಜಿ ಅಧ್ಯಕ್ಷ