ಮುಡಿಪು: ಜಾತ್ಯತೀತ ನೆಲೆಯಲ್ಲಿ ಒಂದಾಗಿರುವ ಹಿಂದೂ ಧರ್ಮವನ್ನು ಒಡೆಯುವ ಕೆಲಸಕ್ಕೆ ರಾಜ್ಯ ಸರಕಾರ ಮುಂದಾಗುತ್ತಿರುವುದರ ಜತೆಗೆ ಹಿಂದೂ ಧಾರ್ಮಿಕ ಮುಖಂಡರನ್ನು, ನಾಯಕರನ್ನು ಬಂಧಿಸುವ ಮೂಲಕ ಹಿಂದೂ ದಮನ ನೀತಿಯನ್ನುಅನುಸರಿಸುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಣಿ ಮಂಡಲದ ಕಾರ್ಯವಾಹಕ ಪೃಥ್ವೀರಾಜ್ ಕಲ್ಲಡ್ಕ ಅಭಿಪ್ರಾಯಪಟ್ಟರು.
ಬಂಟ್ವಾಳ ತಾಲೂಕಿನ ಕುರ್ನಾಡು ಮುಡಿಪುವಿನಲ್ಲಿ ಬುಧವಾರ ಹಿಂದೂ ಜಾಗರಣ ವೇದಿಕೆ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನ ಪ್ರದರ್ಶನ ಮತ್ತು ಖಂಡನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಸ್ವಯಂಘೋಷಿತ ಪ್ರಗತಿ ಪರರು, ವಿಚಾರವಾದಿಗಳು ಎಂದು ಹೇಳಿಕೊಳ್ಳುತ್ತಿರುವವರು ಹಿಂದೂ ಧರ್ಮದ ವಿಚಾರಧಾರೆಗಳನ್ನು ವಿರೋಧಿಸಿ, ನಿಂದಿಸಿ ದಾರಿತಪ್ಪಿಸುವ ಷಡ್ಯಂತರವನ್ನು ಮಾಡುತ್ತಿದ್ದಾರೆ. ಮತ್ತೂಂದೆಡೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಪೂಜನೀಯ ಭಾವದಿಂದ ಆರಾಧಿಸುತ್ತಿರುವ ಕೊರಗಜ್ಜ, ದೇಯಿ ಬೈದ್ಯೆತಿಗೆ ಅವಮಾನ ಮಾಡುವಂತಹ ಹೀನ ಕೃತ್ಯ ಮಾಡುತಿದ್ದರೂ ಸರಕಾರ ಕಣ್ಣುಮುಚ್ಚಿ ಕುಳಿತಿದೆ. ಗೌರಿ ಹತ್ಯೆಯ ಆರೋಪವನ್ನೂ ಹಿಂದೂ ನಾಯಕರ ಹೆಗಲ ಮೇಲೆ ಹಾಕುವಂತಹ ಪ್ರಯತ್ನ ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹಿಂದೂ ಸಮಾಜ ಒಗ್ಗಟಾಗಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.
ಮಂಗಳೂರು ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಮುಖಂಡರಾದ ರಾಜಾರಾಂ ಭಟ್, ಕುರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ತಾಲೂಕು ಪಂಚಾಯತ್ ಸದಸ್ಯ ನವೀನ್ ಪಾದಲ್ಪಾಡಿ, ಕುರ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಿತಿನ್ ಗಟ್ಟಿ ಕುರ್ನಾಡು, ಮುಖಂಡರಾದ ಗೋಪಾಲ ಅಶ್ವತ್ಥಡಿ, ವಿಜೇಶ್ ನಾಯ್ಕ, ಕೇಶವ ಭಟ್, ನವೀನ್ ಶೆಟ್ಟಿ ಕೊಡಕ್ಕಲ್ಲು ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.