ಘಟಪ್ರಭಾ: ಜನಸೇವೆ ಮಾಡಲು ಅನೇಕ ಕಾರ್ಯಗಳಿದ್ದು, ಅವನ್ನೆಲ್ಲ ಬಿಟ್ಟು ಸಂಸ್ಕೃತಿಗೆ ಧಕ್ಕೆ ತರುವ ಕೆಲಸ ಸಿದ್ಧರಾಮಯ್ಯ ಮಾಡಬಾರದು ಎಂದು ಪಟ್ಟಣದ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಪೀಠಾಧಿಕಾರಿಗಳಾದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಪಟ್ಟಣದ ಮೃತ್ಯುಂಜಯ ವೃತ್ತದಲ್ಲಿ ಸ್ವಾಮೀಜಿಗಳ ಕುರಿತಾದ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಾಧು ಸಂತರೆಲ್ಲ ನಮ್ಮ ದೇಶದ ಸಂಸ್ಕೃತಿ ಉಳಿಸುವುದಕ್ಕೋಸ್ಕರ ಮಹಾನ್ ಕಾರ್ಯಗಳನ್ನು ಮಾಡಿದ್ದಾರೆ. ಅವರ ಕಾರ್ಯಗಳನ್ನು ನೆನೆಯಬೇಕೇ ಹೊರತು, ಅವರ ವೇಷಭೂಷಣದ ಕುರಿತು ಮಾತನಾಡಬಾರದು. ಸಿದ್ಧರಾಮಯ್ಯನವರು ತಾವು ನೀಡಿದ ಹೇಳಿಕೆಯನ್ನು ಹಿಂಪಡೆದಿರುವುದಾಗಿ ಹೇಳಬೇಕು. ಇಲ್ಲವಾದಲ್ಲಿ ಈ ಭಾಗದ ಮಠಾಧೀಶರೆಲ್ಲ ಕೂಡಿಕೊಂಡು ತಾಲೂಕು ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಶ್ರೀಗಳು ಹೇಳಿದರು.
ಇದೇ ವೇಳೆ ಹೈಕೋರ್ಟ್ ಆದೇಶವನ್ನು ಲೆಕ್ಕಿಸದೇ ಹಿಜಾಬ್ ಸಮರ್ಥಿಸುವ ನೆಪದಲ್ಲಿ ನಮ್ಮ ಮಠಾಧೀಶರ ಕುರಿತು ಅವಹೇಳಕಾರಿಯಾಗಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಗಣ್ಯರು ಆಗ್ರಹಿಸಿ ಮಾತನಾಡಿದರು.
ಕೇವಲ ಹಿಜಾಬ್ ಹಾಕಿಕೊಳ್ಳುವುದನ್ನು ಏಕೆ ಪ್ರಶ್ನೆ ಮಾಡುತ್ತೀರಿ? ಹಿಂದೂ ಹೆಣ್ಣುಮಕ್ಕಳು ತಲೆ ಮೇಲೆ ಸೆರಗು ಹಾಕಿಕೊಳ್ಳಲ್ವಾ? ಅಷ್ಟೇ ಏಕೆ ಸ್ವಾಮೀಜಿಗಳು ಕೂಡ ತಲೆ ಮೇಲೆ ಬಟ್ಟೆ ಹಾಕಿಕೊಳ್ತಾರೆ. ಅದನ್ನೆಲ್ಲಾ ಪ್ರಶ್ನೆ ಮಾಡೋಕಾಗುತ್ತಾ ಎಂದು ಪ್ರಶ್ನೆ ಕೇಳುವುದನ್ನು ನಾವು ಸಹಿಸುವುದಿಲ್ಲ ಎಂದು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನಂತರ ಪಟ್ಟಣದ ಸ್ಥಳೀಯ ಪೊಲೀಸ್ ಠಾಣೆ ಪಿ.ಐ ಶ್ರೀಶೈಲ ಬ್ಯಾಕೋಡ ಮೂಲಕ ಗೋಕಾಕ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ಪಟ್ಟಣದ ಹೊಸಮಠದ ವಿರೂಪಾಕ್ಷ ದೇವರು, ಮಡಿವಾಳಪ್ಪ ಮುಚಳಂಬಿ, ಗಂಗಾಧರ ಬಡಕುಂದ್ರಿ, ಮಹಾಂತೇಶ ಉದಗಟ್ಟಿಮಠ, ಜಿ.ಎಸ್.ರಜಪೂತ, ಗುರುಬಸಯ್ಯ, ಕರ್ಪೂರಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.