ಕುಂಬಳೆ: ಹಿಂದೂಗಳ ಕೊಲೆಯನ್ನು ಗಂಭೀರವಾಗಿ ಪರಿಗಣಿಸದ ಎಡರಂಗ ಸರಕಾರ, ಅಕ್ರಮ ರಾಜಕೀಯವನ್ನು ಬೆಂಬಲಿಸುವ ಗೃಹಖಾತೆ ಹೊಂದಿದ ರಾಜ್ಯದ ಮುಖ್ಯಮಂತ್ರಿಯವರಿಂದ ಜನ ಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ಮತಾಂಧ ಕೊಲೆ ಆರೋಪಿಗಳು ಕೋಮು ಭಾವನೆ ಕೆದಕಲು ಯತ್ನಿಸುತ್ತಿದ್ದಾರೆ. ನಿರಪರಾಧಿ ಹಿಂದೂಗಳ ಕೊಲೆ ನಡೆಸಿ ಇದರ ಹೆಸರಿನಲ್ಲಿ ವಿದೇಶ, ರಾಜ್ಯದಿಂದ ಹೇರಳ ಹಣ ಸಂಗ್ರಹಿಸುತ್ತಿದ್ದಾರೆ. ರಾಜ್ಯದ ಪೊಲೀಸರ ಮೇಲಿನ ಎಡಬಲ ರಂಗನಾಯಕರ ಒತ್ತಡದಿಂದ ಕೊಲೆಗಡುಕರು ನಿರಪರಾಧಿಗಳಾಗುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಆರೋಪಿಸಿದರು.
ಕಯ್ನಾರು ಬಳಿಯ ಮಂಡೆಕಾಪುವಿನಲ್ಲಿ ಕಳೆದ ಮೇ 4ರಂದು ಮಧ್ಯಾಹ್ನ ಅಂಗಡಿಯೊಳಗೆ ರಾಮಕೃಷ್ಣ ಮೂಲ್ಯ ಅವರನ್ನು ಬರ್ಬರವಾಗಿ ಕೊಲೆಗೈದ ಮತಾಂಧರ ಕೃತ್ಯವನ್ನು ಪ್ರತಿಭಟಿಸಿ ಮಂಜೇಶ್ವರ ಬಿ.ಜೆ.ಪಿ. ಮಂಡಲ ಸಮಿತಿಯ ಆಶ್ರಯದಲ್ಲಿ ಸಂಘ ಪರವಾರದ ವತಿಯಿಂದ ಕುಂಬಳೆ ಸಿ.ಐ. ಕಚೇರಿಗೆ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕೊಲೆಗೆ ಪ್ರತೀಕಾರವಾಗಿ ನಾವು ಕೊಲೆ ನಡೆಸಿರುವುದಾಗಿ ಕೊಲೆ ಆರೋಪಿಗಳು ತನಿಖೆಯಲ್ಲಿ ತಿಳಿಸಿದರೂ ಇದನ್ನು ಲಘುವಾಗಿ ಪರಿಗಣಿಸಿದ ಪೊಲೀಸರು ರಾಜಕೀಯ ಒತ್ತಡದಿಂದ ಕೇಸನ್ನು ಕಳ್ಳತನ ಪ್ರಕರಣವೊಂದಕ್ಕೆ ಥಳುಕು ಹಾಕಿದ್ದಾರೆ.ಆದುದರಿಂದ ಪ್ರಕರಣದ ತನಿಖೆಯನ್ನು ಕೇಂದ್ರ ಏಜೆನ್ಸಿಗೆ ನೀಡಿ ನ್ಯಾಯ ದೊರಕಿಸುವಂತೆ ಒತ್ತಾಯಿಸಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಮಾತನಾಡಿ ಕಾಸರಗೋಡು ಮತ್ತು ಮಂಜೇಶ್ವರ ಉಭಯ ಶಾಸಕರು ಮುಸ್ಲಿಂ ಕಾರ್ಯಕರ್ತನ ಕೊಲೆಗೆ ಸರಕಾರದಿಂದ 10 ಲಕ್ಷ ನೀಡಬೇಕೆಂದು ವಿಧಾನ ಸಭೆಯಲ್ಲಿ ಒತ್ತಾಯಿಸಿರುವರು. ಆದರೆ ಹಿಂದೂಗಳ ಕೊಲೆ ನಡೆದಾಗ ಚಕಾರವೆತ್ತದ ಶಾಸಕರ ನಿಲುವು ಖಂಡನೀಯ. ರಾಮಕೃಷ್ಣ ಕೊಲೆ ಆರೋಪಿಗಳು ಪೆಯ್ಡ ಆರೋಪಿಗಳಾಗಿದ್ದು ಇವರಿಗೆ ಆರ್ಥಿಕ ಮತ್ತು ಪರೋಕ್ಷ ಬೆಂಬಲ ನೀಡಿದವರನ್ನು ಬಂಧಿಸಬೇಕು.ಉಗ್ರ ಸಂಘಟನೆಯ ನಂಟು ಹೊಂದಿರುವ ಈ ತಂಡದ ಸಂಚನ್ನು ಭೇದಿಸಲು ಪೊಲೀಸರು ಸಿದ್ಧರಾಗಬೇಕು. ರಾಜ್ಯದ ಸಿ.ಎಂ. ತನ್ನ ಜವಾಬ್ದಾರಿಯನ್ನು ಮರೆತು ಸಿಪಿಎಂ ಕಣ್ಣೂರು ಏರಿಯಾ ಕಾರ್ಯದರ್ಶಿಯಂತೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ ಅಕ್ರಮ ಕೊಲೆ ರಾಜಕೀಯವಲ್ಲದೆ ಕಾಸರಗೋಡಿನ ಕನ್ನಡದ ಕೊಲೆಗೆ ಮುಂದಾಗಿದ್ದಾರೆ. ರಾಮಕೃಷ್ಣ ಕೊಲೆ ತನಿಖೆಗೆ ರಾಜಕೀಯ ಒತ್ತಡವಿದ್ದಲ್ಲಿ ಪ್ರಕರಣವನ್ನು ಕೇಂದ್ರಕ್ಕೆ ಒಪ್ಪಿಸಬೇಕೆಂಬುದಾಗಿ ಹೇಳಿದರು.
ಅಕ್ರಮ ರಾಜಕೀಯದಿಂದ ಬೇಸತ್ತ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬದಲಾವಣೆಯನ್ನು ಜನ ಬಯಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಂತೆ ಓರ್ವ ಸನ್ಯಾಸಿ ಶ್ರೇಷ್ಠರು ಮುಂದೆ ಕೇರಳದ ಸಿಎಂ ಆಗುವ ಸಾಧ್ಯತೆ ಇದೆ. ಮಂಜೇಶ್ವರ ಶಾಸಕರ ಪಕ್ಷಭೇದ ವರ್ತನೆ ಯಿಂದ ಜನ ರೋಸಿ ಹೋಗಿದ್ದಾರೆ. ಕಾಸರಗೋಡು ಮತ್ತು ಮಂಜೇಶ್ವರ ಉಗ್ರ ಸಂಘಟನೆ ಚಟುವಟಿಕೆಗಳ ಕೇಂದ್ರ ವಾಗುತ್ತಿರುವುದಾಗಿ ಹಿಂದೂ ಐಕ್ಯವೇದಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜನ್ ಮುಳಿಯಾರ್ ಆರೋಪಿಸಿದರು. ಮುರಳೀಧರ ಯಾದವ್ ಸ್ವಾಗತಿಸಿದರು.ಆದರ್ಶ್ ಬಿಎಂ ವಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜೆ.ಪಿ. ಮಂಡಲ ಸಮಿತಿಯ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ವಹಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ, ಬಿ.ಜೆ.ಪಿ., ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಹಿಂದೂ ಐಕ್ಯವೇದಿ, ಯುವಮೋರ್ಚಾ, ಮಹಿಳಾ ಮೋರ್ಚಾ, ಪರಿಶಿಷ್ಟ ಜಾತಿ, ವರ್ಗ ಮೋರ್ಚಾ, ಒ.ಬಿ.ಸಿ. ಮೋರ್ಚಾ, ನಾಯಕ ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ, ಪಿ. ಸುರೇಶ್ ಕುಮಾರ್ ಶೆಟ್ಟಿ, ಅರಿಬೈಲು ಗೋಪಾಲ ಶೆಟ್ಟಿ, ಜನಾರ್ದನ ಪ್ರತಾಪ ನಗರ, ಲೋಕೇಶ್ ಜೋಡುಕಲ್ಲು, ರಘು ಕಾಳ್ಯಂಗಾಡು, ಅಂಗಾರ ಶ್ರೀಪಾದ, ವಿನೋದ್ ಕುಂಬಳೆ, ಸಂಕಪ್ಪ ಭಂಡಾರಿ, ರಾಧಾಕೃಷ್ಣ ರೈ ಮಡ್ವ, ಶೇಂತಾರು ನಾರಾಯಣ ಭಟ್, ಶಂನಾ ಕಿದೂರು, ರಾಮ ಮಾಸ್ತರ್, ಸರೋಜಾ ಆರ್. ಬಲ್ಲಾಳ್, ಪ್ರೇಮಲತಾ ಎಸ್., ಪುಷ್ಪಾಲಕ್ಷ್ಮೀ, ಕೆ. ಜಯಲಕ್ಷ್ಮೀ ಭಟ್, ಪ್ರೇಮಾ ಶೆಟ್ಟಿ, ಜಯಂತಿ ಶೆಟ್ಟಿ, ಆಶಾಲತಾ, ಸೇ°ಹಲತಾ, ರೇವತಿ ನಾಯಕ್, ಭವ್ಯಾ ಬಿ., ರಾಜೀವಿ, ತಾರಾ ವಿ. ಶೆಟ್ಟಿ, ಸಂದೀಪ್ ಗಟ್ಟಿ, ಸುಮಿತ್‌ರಾಜ್ ಪೆರ್ಲ, ಎಂ. ವಿಜಯಕುಮಾರ್ ರೈ, ನ್ಯಾಯವಾದಿ ನವೀನ್‌ರಾಜ್, ಹರೀಶ್ ಬೊಟ್ಟಾರಿ, ಎಂ. ಹರಿಶ್ಚಂದ್ರ, ಪದ್ಮನಾಭ ಕಡಪ್ಪುರ, ಬಾಬು ಕುಬಣೂರು, ಚಂದ್ರಹಾಸ ಸುವರ್ಣ, ಎ.ಕೆ. ಕಯ್ನಾರು, ದಿನೇಶ್ ಆರಿಕ್ಕಾಡಿ, ಧನರಾಜ್, ಹರೀಶ್, ಚಂದ್ರಕಾಂತ್ ಶೆಟ್ಟಿ, ಯಾದವ ಬಡಾಜೆ, ವಸಂತ ವರ್ಕಾಡಿ, ಸದಾಶಿವ ಯು., ಪ್ರಸಾದ್ ರೈ, ವೇಣುಗೋಪಾಲ ಶೆಟ್ಟಿ, ಮೋಹನ ಬಲ್ಲಾಳ್, ಎಸ್. ಸುಬ್ರಹ್ಮಣ್ಯ ಭಟ್, ಕಿಶೋರ್ ನಾಯಕ್, ಬಾಬು ಗಟ್ಟಿ, ಬಾಲಕೃಷ್ಣ ರೈ ಬಾನೋಟು, ಎಂ. ಶಂಕರ ಆಳ್ವ, ಕರುಣಾಕರ ಶೆಟ್ಟಿ ಕಳಾಯಿ, ಸುಧಾಕರ ಕಾಮತ್, ರಮೇಶ್ ಭಟ್, ಭರತ್ ರೈ ಪ್ರತಿಭಟನೆಯ ನೇತೃತ್ವ ವಹಿಸಿದರು.
ಪ್ರತಿಭಟನೆಗೆ ಮುನ್ನ ಬದಿಯಡ್ಕ ರಸ್ತೆಯ ಗೋಪಾಲಕೃಷ್ಣ ಸಭಾಭವನದ ಬಳಿಯಿಂದ ಮಹಿಳೆಯರ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರ ಮೆರವಣಿಗೆ ಸರಕಾರದ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ಆಗಮಿಸಿತು. ಪೊಲೀಸರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನಕಾರರನ್ನು ತಡೆದರು.