Advertisement

ಬಡ್ತಿ ಮೀಸಲಾತಿ ಆದೇಶ ವಿರೋಧಿಸಿ ಪ್ರತಿಭಟನೆ

11:28 AM Feb 24, 2020 | Suhan S |

ಹುಬ್ಬಳ್ಳಿ: ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಗೆ ಬಡ್ತಿಯಲ್ಲಿ ಮೀಸಲಾತಿ ಮೂಲಭೂತ ಹಕ್ಕಲ್ಲವೆಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದ್ದನ್ನು ವಿರೋಧಿಸಿ ಹಾಗೂ ತಕ್ಷಣ ಸುಗ್ರೀವಾಜ್ಞೆ ಹೊರಡಿ ಸಬೇಕೆಂದು ಆಗ್ರಹಿಸಿ ಹು-ಧಾ ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳದವರು ನಗರದಲ್ಲಿ ರವಿವಾರ ಪ್ರತಿಭಟನೆ ನಡೆಸಿದರು.

Advertisement

ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಹಾಮಂಡಳದವರು ಸಾಂಕೇತಿಕವಾಗಿ ಶಾಂತಿಯುತ ಬಂದ್‌ ಮಾಡಿ, ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ಮಂಡಳದ ಮುಖಂಡರಾದ ಪಿತಾಂಬ್ರಪ್ಪ ಬಿಳಾರ, ಗುರುನಾಥ ಉಳ್ಳಿಕಾಶಿ ಮಾತನಾಡಿ, ಪರಿಶಿಷ್ಟ ಜಾತಿ-ಪಂಗಡ, ಹಿಂದುಳಿದ ವರ್ಗಗಳ ನೌಕರರಿಗೆ ಸರಕಾರಿ ನೌಕರಿಯಲ್ಲಿ, ಬಡ್ತಿ ನೇಮಕಾತಿ, ಬಡ್ತಿಯಲ್ಲಿ ಮೀಸಲಾತಿಯು ಮೂಲಭೂತವಾದುದ್ದಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ಯಾವುದೇ ಸರಕಾರಿ ಹುದ್ದೆಯ ನೇಮಕಾತಿಯಲ್ಲಿ ಸಹ ಮೀಸಲಾತಿ ಮೂಲಭೂತವಾದುದ್ದಲ್ಲ. ಅದು ಆಯಾ ರಾಜ್ಯ ಸರಕಾರಗಳಿಗೆ ಬಿಟ್ಟಿದ್ದು ಎಂದು ಆದೇಶಿಸಿದೆ. ಇದು ದಲಿತ ವಿರೋಧಿಯಾಗಿದೆ. ಈ ಆದೇಶ ವಿರೋಧಿಸಿ ಭೀಮ ಆರ್ಮಿಯ ಚಂದ್ರಶೇಖರ ಆಜಾದ್‌ ಅವರು ಭಾರತ ಬಂದ್‌ ಕರೆ ನೀಡಿದ್ದಾರೆ. ಅವರ ಹೋರಾಟ ಬೆಂಬಲಿಸಿ ಸಾಂಕೇತಿಕವಾಗಿ ಶಾಂತಿಯುತ ಬಂದ್‌ ಮಾಡುತ್ತಿದ್ದೇವೆ ಎಂದರು.

ಸುಪ್ರೀಂ ಕೋರ್ಟ್‌ನ ಆದೇಶ ಸಂವಿಧಾನದಲ್ಲಿ ಶೋಷಿತ ಸಮುದಾಯಕ್ಕೆ ಸಮಾನತೆಗಾಗಿ ನೀಡಲಾದ ಹಕ್ಕನ್ನು ಸಂಪೂರ್ಣ ತಿರಸ್ಕರಿಸಿದಂತಾಗಿದೆ. ಕಾರಣ ಕೇಂದ್ರ ಸರಕಾರ ತಕ್ಷಣ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಸಾರ್ವಜನಿಕ ಹುದ್ದೆ ಹಾಗೂ ಬಡ್ತಿಯಲ್ಲಿ ಮೀಸಲಾತಿ ಕಡ್ಡಾಯಗೊಳಿಸುವ ಕಾನೂನು ಜಾರಿಗೊಳಿಸಬೇಕು. ದಲಿತರಿಗೆ ಎಲ್ಲ ಹುದ್ದೆಗಳಲ್ಲಿ ಹಾಗೂ ಖಾಸಗೀ ಕರಣದಲ್ಲೂ ಮೀಸಲಾತಿ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು. ತಹಶೀಲ್ದಾರ್‌ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿಪತ್ರ ಸಲ್ಲಿಸಿದರು.

ನಂತರ ಪ್ರತಿಭಟನಾಕಾರರು ಪ್ರಧಾನ ಅಂಚೆ ಕಚೇರಿ ಎದುರಿನ ಡಾ| ಅಂಬೇಡ್ಕರ್‌ ವೃತ್ತಕ್ಕೆ ತೆರಳಿ ಅಂಬೇಡ್ಕರ್‌ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ವೆಂಕಟೇಶ ಮೇಸ್ತ್ರಿ, ಯಮನೂರ ಗುಡಿಹಾಳ, ಫಕ್ಕಣ್ಣ ದೊಡಮನಿ, ರೇವಣಸಿದ್ದಪ್ಪ ಹೊಸಮನಿ, ಸುನಿಲ ನಿಟ್ಟೂರ, ದೇವೇಂದ್ರಪ್ಪ ಇಟಗಿ, ಬಸವರಾಜ ಹರಿಜನ, ರೋಹಿತ ಗಾಮನಗಟ್ಟಿ, ಬಸಪ್ಪ ದೊಡಮನಿ, ಸೋಮಶೇಖರ ಕಡೂರ, ಸಿದ್ದಪ್ಪ ಕೌತಾಳ, ಇಂದುಮತಿ ಶಿರಗಾಂವಿ, ಹುಲಿಗೆಮ್ಮ ಚಿಕ್ಕತುಂಬಳ, ವಂದನಾ ಬಿ., ಬೇಗಂ ನದಾಫ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next