Advertisement

ಕೃಷಿ ಶಿಕ್ಷಣ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ 

04:41 PM Jun 28, 2018 | Team Udayavani |

ಧಾರವಾಡ: ಕೃಷಿ ಶಿಕ್ಷಣದ ಖಾಸಗೀಕರಣದಿಂದ ರೈತರ ಹಾಗೂ ವಿದ್ಯಾರ್ಥಿಗಳ ಮೇಲೆ ಆಗುತ್ತಿರುವ ಅನ್ಯಾಯ ಖಂಡಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಕಡಪಾ ಮೈದಾನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ವಿದ್ಯಾರ್ಥಿಗಳು, ಡಿಸಿ ಕಚೇರಿ ಎದುರೇ ಕೆಲ ಹೊತ್ತು ಪ್ರತಿಭಟನಾ ಧರಣಿ ಕೈಗೊಂಡು, ಕೃಷಿ ಶಿಕ್ಷಣ ಖಾಸಗೀಕರಣ ತಡೆಯುವ ಮೂಲಕ ರೈತರ ‘ಜೀವ ಉಳಿಸುವ’ ಕೆಲಸಕ್ಕೆ ಸರಕಾರ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಜ್ಯುಬಲಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಹೊತ್ತು ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು, ಅಣುಕು ಶವಯಾತ್ರೆ ಕೈಗೊಂಡು ಪ್ರತಿಕೃತಿ ದಹನ ಮಾಡಿದರು.

Advertisement

ಕರ್ನಾಟಕದಲ್ಲಿನ ಎಲ್ಲ ಸರಕಾರಿ ಕೃಷಿ ವಿಶ್ವವಿದ್ಯಾಲಯಗಳ ಪ್ರವೇಶ ಸಾಮರ್ಥ್ಯ ಪ್ರತಿ ವರ್ಷಕ್ಕೆ 2272 ಇದ್ದು, ಅದರ ಖಾಸಗಿ ಮಹಾವಿದ್ಯಾಲಯ ಒಂದರಲ್ಲಿ 1500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ಕೊಟ್ಟಿದೆ. ಇದರಿಂದ ಗುಣಮಟ್ಟ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ ಕಳಪೆ ಗುಣಮಟ್ಟದ ಕೃಷಿ ಸೇವೆಗೆ ದಾರಿ ಮಾಡಿಕೊಡಲಾಗುತ್ತಿದೆ. ಇದಲ್ಲದೇ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯ ಪ್ರವೇಶಕ್ಕಾಗಿ ಪ್ರಸ್ತುತ ಎಲ್ಲ ವಿದ್ಯಾಲಯಗಳನ್ನು ಒಳಗೊಂಡಿರುವ ಸಮನ್ವಯ ಸಮಿತಿ ಮಾಡಿ ಪ್ರವೇಶ ಪರೀಕ್ಷೆ ಮಾಡಲಾಗುತ್ತಿದೆ. ಆದರೆ ಇದು ಖಾಸಗಿ ಮಹಾವಿದ್ಯಾಲಯದಲ್ಲಿ ಕಂಡು ಬಂದಿಲ್ಲ ಎಂದು ದೂರಿದರು.

‘ರೈ ಟೆಕ್ನಾಲಜಿ’ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಕರ್ನಾಟಕ ಕೃಷಿ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅನರ್ಹಗೊಳಿಸಬೇಕು. ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ಆಕರಣೆ,ವಿದ್ಯಾರ್ಥಿ ವೇತನದ ವಿದ್ಯಾರ್ಥಿಗಳಿಗೆ ಮೋಸ  ಮಾಡಲಾಗುತ್ತಿದೆ. ಈ ಕಾಲೇಜಿನ ಡಿಪ್ಲೋಮಾ ಹಾಗೂ ಕೃಷಿ ಪದವಿಗಳಿಗೆ ಮಾನ್ಯತೆ ಇಲ್ಲ. ಇದರ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಂದ ಈಗಾಗಲೇ ಹಲವು ದೂರುಗಳು ಬಂದಿವೆ. ಆದ್ದರಿಂದ ಕೃಷಿ ಖಾಸಗಿ ಕಾಲೇಜು ರದ್ದುಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ವಿದ್ಯಾರ್ಥಿ ಮುಖಂಡರಾದ ರೋಹನ್‌ ಸಾರಥಿ, ಪ್ರಮೋದ ಗೌಡ, ಬಿಎಸ್ಸಿ ಅಗ್ರಿ, ಅಗ್ರಿ ಮಾರ್ಕೆಟಿಂಗ್‌, ಹೋಮ್‌ ಸೈನ್ಸ್‌, ಕೃಷಿ ಸ್ನಾತಕೋತ್ತರ ಪದವಿಯ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next