ಔರಾದ: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಿಲಿಂಡರ್‌ಗೆ ಹೂವಿನ ಹಾರ ಹಾಕಿ ಪ್ರತಿಭಟಿಸಿದರು.
ಪಕ್ಷದ ತಾಲೂಕು ಅಧ್ಯಕ್ಷ ರಾಜಕುಮಾರ ಹಲಬರ್ಗೆ ನೇತೃತ್ವದಲ್ಲಿ ಆನಂದ ಚವ್ಹಾಣ, ಮುಖಂಡ ಲಕ್ಷ್ಮಣ ಸೋರಳ್ಳಿಕರ್, ವಿಶ್ವನಾಥ ಧೀನೆ, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸುಧಾಕರ ಕೊಳ್ಳೂರ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ದತ್ತಾತ್ರಿ ಬಾಪೂರೆ, ಬಂಟಿ ದರ್ಬಾರೆ ಸೇರಿದಂತೆ ಇನ್ನಿತರ ಪಕ್ಷದ ಮುಖಂಡರು, ಕಾರ್ಯಕರ್ತರು ಕನ್ನಡಾಂಬೆ ವೃತ್ತದ ಬಳಿ ಜಮಾಯಿಸಿದ್ದರು.
ಮುಖ್ಯರಸ್ತೆ ಮಾರ್ಗವಾಗಿ ಪ್ರತಿಭಟನಾ ರ್ಯಾಲಿ ಮೂಲಕ ಬಸ್ ನಿಲ್ದಾಣದ ಮುಂಭಾಗದಲ್ಲಿ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ಮುಖಂಡ ಡಾ| ಲಕ್ಷ್ಮಣ ಸೋರಳ್ಳಿಕರ್ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಬಡ ಹಾಗೂ ಕೂಲಿ ಕಾರ್ಮಿಕರು ನಿತ್ಯ ಜೀವನ ನಡೆಸುವುದು ತುಂಬಾ ಕಷ್ಟಕರವಾಗುತ್ತಿದೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸುಧಾಕರ ಕೊಳ್ಳೂರ ಮಾತನಾಡಿ, ದೇಶದಲ್ಲಿನ ಬಿಜೆಪಿ ಸರ್ಕಾರ ಜನರ ಸಮಸ್ಯೆ ಬಗೆಹರಿಸಲು ಮುಂದಾಗದೆ ಜಾತಿಜಾತಿಗಳ ಮಧ್ಯೆ ವಿಷದ ಬೀಜ ಬಿತ್ತನೆ ಮಾಡಿ ರಾಜಕೀಯ ಮತ ಬ್ಯಾಂಕ್‌ಗಾಗಿ ಕೆಲಸ ಮಾಡುತ್ತಿದೆ ಎಂದರು.
ಬಾಲಾಜಿ ಕಾಸಲೆ, ರಾಮಣ್ಣ ವಡಿಯರ್, ಪ್ರಹ್ಲಾದ, ಬಸವರಾಜ ದೇಶಮುಖ, ಡಾ|ಫಯಾಜಲಿ, ಓಂಪ್ರಕಾಶ ಸಂತಪುರ, ರಾಜಕುಮಾರ ಎಡವೆ, ಶಂಕರ ಹರಿದೇವ, ವಿಶ್ವನಾಥ ಹಂಗರಗೆ, ಸಂಗಮೇಶ ಹಕ್ಯಾಳ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಇದ್ದರು.