Advertisement

ತೈಲೋತ್ಪನ್ನ ಬೆಲೆ ಹೆಚ್ಚಳ ಖಂಡಿಸಿ 3 ವಿವಿಧ ಸಂಘಟನೆಗಳ ಪ್ರತಿಭಟನೆ

10:11 AM Jun 25, 2020 | Suhan S |

ಹುಬ್ಬಳ್ಳಿ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ ವಿರೋಧಿಸಿ ವಿವಿಧ ಸಂಘಟನೆಗಳಿಂದ ಇಲ್ಲಿನ ಮಿನಿವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

Advertisement

ಸಿಐಟಿಯು, ಎಐಟಿಯುಸಿ ಮತ್ತು ಐಎನ್‌ಟಿಯುಸಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಬುಧವಾರ ತಹಶೀಲ್ದಾರ್‌ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕಳೆದ 15 ದಿನಗಳಿಂದ 7.92ರೂ. ಪೆಟ್ರೋಲ್‌ ಹಾಗೂ 8.88 ರೂ.ಡಿಸೇಲ್‌ ದರ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ ದೇಶದಲ್ಲಿ ಮಾತ್ರ ದರ ನಿತ್ಯ ಏರಿಕೆಯಾಗುತ್ತಿದೆ. ಕೇಂದ್ರ ಸರಕಾರ ತನ್ನ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಹೆಚ್ಚಿನ ತೆರಿಗೆ ವಿಧಿಸಿರುವುದು ಪ್ರಮುಖ ಕಾರಣವಾಗಿದ್ದು, ಕೂಡಲೇ ತೆರಿಗೆ ಸಂಪೂರ್ಣ ಕಡಿತಗೊಳಿಸಬೇಕೆಂದು ಒತ್ತಾಯಿಸಿದರು.

ಕೇಂದ್ರ ಸರಕಾರದ ಮಹಾಮಾರಿ ಕೋವಿಡ್ ನಿಯಂತ್ರಣದಲ್ಲಿ ಏಕಪಕ್ಷೀಯ ಹಾಗೂ ಅಯೋಜಿತ ಕ್ರಮಗಳಿಂದ ಜನರ ಸಂಕಷ್ಟಗಳು ಹೆಚ್ಚಲು ಕಾರಣವಾಗಿದೆ. ಕಳೆದ 3 ತಿಂಗಳಿಂದ ಕೋವಿಡ್‌-19 ದಾಳಿಯಿಂದ ಜನ ತತ್ತರಿಸಿದ್ದು, ಲಾಕಡೌನ್‌ನಿಂದ ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಜನರು ಆರ್ಥಿಕ ಸಂಕಷ್ಟದಿಂದ ನಲುಗಿರುವ ಸಂದರ್ಭದಲ್ಲಿ ಇಂಧನ ಬೆಲೆ ಹೆಚ್ಚಳವಾಗುವ ಮೂಲಕ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇದರಿಂದ ಜನರು ಮತ್ತಷ್ಟು ಸಮಸ್ಯೆಗೆ ಸಿಲುಕಿದಂತಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರಕಾರಗಳು ಜನರ ಸುಲಿಗೆಗೆ ಮುಂದಾಗಿದೆ ಎಂದು ಆರೋಪಿಸಿದರು.

ಇಂಧನ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಲಿವೆ ಎನ್ನುವ ಕನಿಷ್ಠ ಪರಿಜ್ಞಾನ ಕೇಂದ್ರ ಸರಕಾರಕ್ಕೆ ಇಲ್ಲದಂತಾಗಿದೆ. ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಬದಲು ಶ್ರೀಮಂತರ ಸಂಪತ್ತಿನ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿ ಬೊಕ್ಕಸ ತುಂಬಿಕೊಳ್ಳುವ ಕೆಲಸ ಮಾಡಲಿ. ಪೆಟ್ರೋಲ್‌ ಉತ್ಪನ್ನಗಳ ಮೇಲಿನ ತೆರಿಗೆ ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು. ಮುಖಂಡರಾದ ಮಹೇಶ ಪತ್ತಾರ, ಗುರುಸಿದ್ದಪ್ಪ ಅಂಬಿಗೇರ, ಎನ್‌.ಎ.ಖಾಜಿ, ದೇವಾನಂದ ಜಗಾಪೂರ, ಬಾಬಾಜಾನ ಮುಧೋಳ, ರಾಜಶೇಖರ ಮೆಣಸಿನಕಾಯಿ, ಬಿ.ಎಸ್‌.ಸೊಪ್ಪಿನ, ಬಸವರಾಜ ಕೋರಿಮಠ, ಎ.ಸಿ.ನವಲೂರ, ಎ.ಎಸ್‌.ಪೀರಜಾದೆ, ಎಂ.ಎಚ್‌.ಮುಲ್ಲಾ, ರಮೇಶ ಭೋಸ್ಲೆ, ಚಿದಾನಂದ ಸವದತ್ತಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next