ಎಚ್.ಡಿ.ಕೋಟೆ: ಹೆಚ್ಚುವರಿಯಾಗಿ ನಿಯೋಜನೆಗೊಂಡಿದ್ದ ಪಂಚಾಯಿತಿಯಿಂದ ಕರ್ತವ್ಯ ವಿಮುಕ್ತಗೊಳಿಸಿ ಆದೇಶ ನೀಡಿದ 15 ದಿನಗಳ ಬಳಿಕ ಪಂಚಾಯಿತಿಗೆ ಹೋಗದೆ ಪಿಡಿಒ ಒಬ್ಬರು ಬೇರೆ ಗ್ರಾಪಂಯಲ್ಲೇ ಕುಳಿತು ಸುಮಾರು 90ಕ್ಕೂ ಅಧಿಕ 11ಬಿ ಅಕ್ರಮವಾಗಿ ಖಾತೆ ಮಾಡಿ ಪ್ರಿಂಟ್ ತೆಗೆದಿರುವ ಘಟನೆ ತಾಲೂಕಿನ ಪಡುಕೋಟೆ ಕಾವಲ್ ಪಂಚಾಯಿತಿಯಲ್ಲಿ ನಡೆದಿರುವ ಆರೋಪ ಸದಸ್ಯರಿಂದ ಕೇಳಿ ಬಂದಿದೆ.
ಆರೋಪಕ್ಕೆ ಪೂರಕವಾಗಿ ಗ್ರಾಪಂ ಸದಸ್ಯರು ಪಂಚಾಯಿತಿ ಪಿಡಿಒ ವಿಷಕಂಠಾಚಾರಿ ಏ.22ರಂದು ಪಡುಕೋಟೆ ಕಾವಲ್ ಗ್ರಾಪಂ ಹೆಚ್ಚುವರಿ ಪಿಡಿಒ ಹುದ್ದೆಯಿಂದ ವಿಮುಕ್ತಿ ಗೊಳಿಸಿ, ಸದರಿ ಜಾಗಕ್ಕೆ ಎಸ್.ಅಂಕಪ್ಪ ಅವರನ್ನು ನಿಯೋಜನೆಗೊಳಿಸಿ ಏ.22ರಂದು ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಆದೇಶ ಹೊರಡಿಸಿರುವ ನಕಲು ಹಾಜರು ಪಡಿಸಿದ್ದಾರೆ.
ಏನದು ಘಟನೆ: ಪಡುಕೋಟೆ ಕಾವಲ್ ಗ್ರಾಪಂ ಪಿಡಿಒ ಭಾಗ್ಯ ವಿರುದ್ಧ ಗ್ರಾಮಸ್ಥರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆ ಜಾಗಕ್ಕೆ ಸವ್ವೆ ಗ್ರಾಪಂ ಪಿಡಿಒ ವಿಷಕಂಠಾಚಾರ ಅವರನ್ನು ಪ್ರಭಾರವಾಗಿ ನಿಯೋಜಿಸಲಾಗಿತ್ತು. ವಿಷಕಂಠಾಚಾರಿ ಅಲ್ಲಿ ಹಲವು ಅಕ್ರಮಗಳನ್ನು ಮಾಡಿರುವ ದೂರುಗಳು, ಅಕ್ರಮವಾಗಿ 11ಬಿ ದಾಖಲಿಸಲು ಗ್ರಾಮಸ್ಥರಿಂದ 25-30 ಸಾವಿರ ಪಡೆದುಕೊಳ್ಳುತ್ತಿದ್ದರು ಅನ್ನುವ ಆರೋಪ ಕೇಳಿ ಬಂದ ಹಿನ್ನೆಲೆ ಇಒ ವಿಚಾರಣೆ ಕಾಯ್ದಿರಿಸಿದ್ದು, ಕಳೆದ 15 ದಿನಗಳ ಹಿಂದೆ ವಿಷಕಂಠಾಚಾರಿ ವಿರುದ್ಧ ದೂರು ಕೇಳಿ ಬಂದ ಹಿನ್ನೆಲೆ ಎಸಿಬಿ ದಾಳಿ ನಡೆಸಿದ ಸಂದರ್ಭದಲ್ಲಿ ಕ್ಷಣಮಾತ್ರದಲ್ಲಿ ವಿಷಕಂಠಾಚಾರಿ ಬಚಾವಾಗಿದ್ದರು. ಬಳಿಕ ಸರ್ಕಾರದ ಆದೇಶದಂತೆ ಪಡು ಕೋಟೆ ಕಾವಲ್ ಪಂಚಾಯಿತಿಗೆ ಪಿಡಿಒ ಆಗಿ ಎಸ್.ಅಂಕಪ್ಪ ಅವರನ್ನು ಏ.22ರಂದು ನಿಯೋಜನೆಗೊಳಿಸಿ ಅದೇ ದಿನದಿಂದ ವಿಷಕಂಠಾಚಾರಿ ಅವರನ್ನು ಪಡುಕೋಟೆ ಯಿಂದ ವಿಮುಕ್ತಿಗೊಳಿಸಿ ಆದೇಶ ನೀಡಲಾಗಿತ್ತು. ವಿ
ಮುಕ್ತಿಗೊಳಿಸಿದ 15 ದಿನಗಳ ಬಳಿಕ ಅಂದರೆ ಮೇ 5, 6 ಮತ್ತು 7ರಂದು ಪಿಡಿಒ ವಿಷಕಂಠಾಚಾರಿ ಪಡುಕೋಟೆ ಕಾವಲ್ ಗ್ರಾಪಂಗೆ ಬಾರದೇ ಇದ್ದರೂ ಬೇರಾವುದೋ ಪಂಚಾಯಿತಿಯಲ್ಲಿ ಕುಳಿತು ಅಕ್ರಮವಾಗಿ 90ಕ್ಕೂ ಅಧಿಕ ಅಕ್ರಮ 11ಬಿ ಖಾತೆ ಮಾಡಿ ರುವುದಾಗಿ ಗ್ರಾಪಂ ಸದಸ್ಯರು ಮತ್ತು ಗ್ರಾಮ ಸ್ಥರು ಆರೋಪಿಸಿ ತಾಪಂ ಕಾರ್ಯಾಲಯದ ಬಳಿ ಅಕ್ರಮಗಳ ಖಾತೆಗಳ ದಾಖಲಾತಿ, ಮೇ 5, 6 ಮತ್ತು 7ರಂದು ಪಂಚಾಯಿತಿ ದಿನದ ಹಾಜರಾತಿಯಲ್ಲಿ ಸಹಿಹಾಕದೇ ಗೈರಾಗಿರುವುದು ಮತ್ತು ಪಂಚಾಯಿತಿಯಿಂದ 22ರಂದು ವಿಮುಕ್ತಿಗೊಳಿಸಿರುವ ಪತ್ರಗಳನ್ನು ದಾಖಲೆ ಸಮೇತ ಹಾಜರು ಪಡಿಸಿದ್ದಾರೆ.
ಒಂದೊಂದು ಅಕ್ರಮ ಖಾತೆಗಳಿಗೆ ವಿಷಕಂಠಾಚಾರಿ 30-40 ಸಾವಿರ ಹಣ ಪಡೆದು ಕೊಂಡಿರುವುದಾಗಿ ಆರೋಪಿಸಿರುವ ಪಂಚಾಯಿತಿ ಸದಸ್ಯರು ಕೂಡಲೇ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥ ಪಿಡಿಒ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಗ್ರಾಪಂ ಸದಸ್ಯರಾದ ಈಶ್ವರಯ್ಯ, ನವೀನ್ ಕುಮಾರ್, ಅಶೋಕ, ದಾಸಪ್ಪ, ಮಹದೇವನ್, ದಿವಾಕರ, ಪ್ರವೀಣ್, ಗ್ರಾಮಸ್ಥರಾದ ಸುರೇಶ್, ಪೃಥ್ವಿ, ಅಂಕಪ್ಪ, ರಮೇಶ, ವೆಂಕಟೇಶ್, ಸೀನನಾಯ್ಕ ಇತರರು ಇದ್ದರು.
– ಎಚ್.ಬಿ. ಬಸವರಾಜು