ಸಾಗರ: ತಾಲೂಕಿನ ಖಂಡಿಕಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಗ್ವೆ ಗ್ರಾಮದಲ್ಲಿ ಜಮೀನು ಮಾಲೀಕ ಶ್ರೀಕಾಂತ್ ನಾಯ್ಕ್ ಅವರ ನಿವೇಶನ ಪರಿವರ್ತನೆಗೆ ವಿನಾಕಾರಣ ಪಿಡಿಓ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿ ಶ್ರೀಕಾಂತ್ ನಾಯ್ಕ್ ಕುಟುಂಬದವರು ಮತ್ತು ಕುಗ್ವೆ ಗ್ರಾಮಸ್ಥರು ತಾಲೂಕು ಪಂಚಾಯ್ತಿ ಕಚೇರಿ ಎದುರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಂಗಳವಾರ 2 ನೆಯ ದಿನಕ್ಕೆ ಕಾಲಿಟ್ಟಿದೆ.
ತಾಲೂಕು ರೈತ ಸಂಘದ ಪದಾಧಿಕಾರಿಗಳು ಮಂಗಳವಾರದ ಉಪನ್ಯಾಸ ಸತ್ಯಾಗ್ರಹ ಬೆಂಬಲ ಸೂಚಿಸಿ ಭಾಗವಹಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ದಿನೇಶ್ ಶಿರವಾಳ ಮಾತನಾಡಿ, ಖಂಡಿಕಾ ಗ್ರಾಪಂ ವ್ಯಾಪ್ತಿ ಜಮೀನು ಪರಿವರ್ತನೆ ಸಂಬಂಧ ಶ್ರೀಕಾಂತ್ ನಾಯ್ಕ್ ಎಂಬುವವರಿಗೆ ಗ್ರಾ.ಪಂ ಅಧಿಕಾರಿಗಳು ಪೀಡಿಸುತ್ತಿದ್ದಾರೆ. ಲೇಔಟ್ ಮಾಡುವವರು ಎಲ್ಲರೂ ಶ್ರೀಮಂತರಲ್ಲ. ಶ್ರೀಕಾಂತ್ ಬಡ ರೈತರಾಗಿದ್ದು, ಸಾಲ ಮಾಡಿ, ಲೇಔಟ್ ಮಾಡುವ ಯತ್ನ ಮಾಡಿದ್ದಾರೆ. ಈ ವಿಚಾರದಲ್ಲಿ ಕಾನೂನುಬದ್ಧ ಸೌಲತ್ತು ನೀಡದೆ ಪಿಡಿಓ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ದೇಸಿ ಫೌಂಡೇಶನ್ ಸಂಸ್ಥಾಪಕ ಶ್ರೀಧರಮೂರ್ತಿ ಮಾತನಾಡಿ, ಶ್ರೀಕಾಂತ್ ನಾಯ್ಕ್ ಅವರಿಗಾದ ಅನ್ಯಾಯ ಖಂಡಿಸಿ ಸೋಮವಾರ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ಮುಂದುವರಿದಿದೆ. ಸೋಮವಾರ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿಲ್ಲ. ದೇಸಿ ಫೌಂಡೇಶನ್ ಸಂಸ್ಥೆಯ ಯುವ ಸದಸ್ಯರು ಬೆಂಬಲ ಸೂಚಿಸಿ, ಧರಣಿಯಲ್ಲಿ ಭಾಗವಹಿಸಿದ್ದಾರೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವ ಜತೆಗೆ, ತಪ್ಪಿತಸ್ಥ ಅಧಿಕಾರಿಗಳ ರಕ್ಷಣೆ ಮಾಡುತ್ತಿರುವುದು ಖಂಡನೀಯ. ಜಿಲಾಧ್ಲಿಕಾರಿಗಳು ಕ್ರಮ ತೆಗೆದುಕೊಳ್ಳುವವರೆಗೆ, ಜಮೀನಿನ ಮಾಲೀಕರಿಗೆ ನ್ಯಾಯ ದೊರಕುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ ಎಂದರು.
ಇದನ್ನೂ ಓದಿ : ರಸ್ತೆ ಪಕ್ಕದ ಅಕೇಶಿಯಾ ಮರ ಕಟಾವು ; ಲಾರಿ ತಡೆದು ಪ್ರತಿಭಟನೆ
ಜಮೀನು ಮಾಲೀಕ ಶ್ರೀಕಾಂತ್ ನಾಯ್ಕ್, ಸುಜಾತ, ಶಶಾಂಕ್ ನಾಯ್ಕ್, ದಿವ್ಯಶ್ರಿ ಇನ್ನಿತರರು ಹಾಜರಿದ್ದರು.