ಕನಕಪುರ: ತೈಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ ನೇತೃತ್ವದಲ್ಲಿ ನಗರದ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಆರಂಭವಾದ ಪ್ರತಿಭಟನೆ ನಗರದ ಮುಖ್ಯ ರಸ್ತೆಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಚೆನ್ನಬಸಪ್ಪ ವೃತ್ತದ ಬಳಿ ಜಮಾವಣೆಗೊಂಡ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಕೃಷಿ ತಿದ್ದುಪಡಿ ಕಾಯ್ದೆ, ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಬೆಲೆ ಏರಿಕೆ ಬಿಸಿಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಜನರನ್ನು ಬೇಸಿಗೆ ಬಿಸಿಲಿನಂತೆ ಸುಡುತ್ತಿದೆ.ಅಡುಗೆ ಅನಿಲದ ಬೆಲೆ ಆಕಾಶದೆತ್ತರಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ತೈಲ ಬೆಲೆ ಏರಿಕೆ ಇದ್ದರೂ ರಿಯಾ ಯಿತಿ ದರದಲ್ಲಿ ತೈಲ ಪೂರೈಕೆ ಮಾಡಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೋವಿಡ್ ನಂತರ ಬಡ ಮತ್ತು ಮಧ್ಯಮ ವರ್ಗದ ಜನರ ಜೀವನ ನಿರ್ವಹಣೆಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶ ಅಭಿವೃದ್ಧಿ ಸಾಧ್ಯವಿಲ್ಲ: ಸಾರ್ವಜನಿಕರಿಗೆ ನೆರವಾಗಬೇಕಾದ ಸರ್ಕಾರ ಜನರ ಹಣವನ್ನು ಲೂಟಿ ಮಾಡುತ್ತಿದೆ. ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸಬೇಕಾದಮಂತ್ರಿಗಳು ತಮ್ಮ ಕಾಮ ಪುರಾಣವನ್ನು ಬಿಡುಗಡೆ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಇಂತಹ ನಾಚಿಕೆಗೆಟ್ಟ ಜನಪ್ರತಿನಿಧಿಗಳಿಂದ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಮೂರ್ತಿ, ವಿಜಯದೇವ್, ತಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್, ನಗರ ಸಭಾ ಮಾಜಿ ಅಧ್ಯಕ್ಷ ದಿಲೀಪ್, ಯೂತ್‌ಕಾಂಗ್ರೆಸ್ ಅನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಚಿರ್ಣಕುಪ್ಪೆ ರವಿ ಇದ್ದರು.