ಯಾದಗಿರಿ: ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ ಸೇರಿದಂತೆ ಇತರೆ ಕೊಲೆ ಪ್ರಕರಣ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಶುಕ್ರವಾರ ಬೆಳಗ್ಗೆ ಬೃಹತ್ ಪ್ರತಿಭಟನೆ ನಡೆಸಿದರು.
ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ, ಭಾಲ್ಕಿ ತಾಲೂಕಿನ ಕೊಸಂ ಗ್ರಾಮದ ಯುವತಿ ಹಾಗೂ ಯಾದಗಿರಿಯ ಭೀಮು ತಳವಾರ ಅವರ ಕೊಲೆ ಖಂಡಿಸಿ ಕಾರ್ಯಕರ್ತರು ಕಾಂಗ್ರೆಸ್ ಸರಕಾರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಕೊಲೆ, ಸುಲಿಗೆ ಸೇರಿದಂತೆ ಹಿಂದೂ ಯುವಕರ ಕಗ್ಗೊಲೆಗಳು ಹೆಚ್ಚಾಗುತ್ತಿವೆ. ಇದರಿಂದ ಸಾರ್ವಜನಿಕರು ನೆಮ್ಮದಿ ಜೀವನ ಸಾಗಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದು, ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸರಕಾರ ವಿಫಲವಾಗಿದೆ ಎಂದು ದೂರಿದರು.
ಕಳೆದ ಒಂದು ವರ್ಷಗಳಿಂದ ಹಿಂದೂ ಕಾರ್ಯಕರ್ತರ ಕೊಲೆಗಳು ಅವ್ಯಾಹತವಾಗಿ ನಡೆದಿದ್ದು, ಬೆಂಗಳೂರಿನಲ್ಲಿ ಸಂತೋಷ ಎಂಬ ಯುವಕನ ಕೊಲೆಯಾಗಿದೆ. ಇನ್ನೂ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದ್ದು, ಇದರಿಂದ ಮಹಿಳೆಯರಿಗೆ ಕರ್ನಾಟಕ ಸುರಕ್ಷಿತವಲ್ಲ ಎಂಬ ಆತಂಕದ ಸಂಗತಿ ಬಯಲಾದಂತಾಗಿದೆ ಎಂದು ಆರೋಪಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೊಲೆಗಳಿಗೆ ಕಾರಣರಾದ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು. ರಾಜ್ಯದಲ್ಲಿನ ಮಹಿಳೆಯರಿಗೆ ಸರಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. ನಗರದ ಸುಭಾಶ್ ವೃತ್ತದಲ್ಲಿ ಸುಮಾರು ಒಂದು ಗಂಟೆಗಳ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕಾರಣ ವಾಹನ ಸವಾರರು ಪರದಾಡಿದರು. ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ನಾಗೋಜಿ ರಾವ್, ಮಾಜಿ ಶಾಸಕ ಡಾ| ವೀರಬಸವಂತರಡ್ಡಿ ಮುದ್ನಾಳ, ಶರಣಗೌಡ ಬಾಡಿಯಾಳ, ಡಾ| ಶರಣ ಭೂಪಾ ಲರೆಡ್ಡಿ ನಾಯ್ಕಲ್, ಎಸ್.ಪಿ. ನಾಡೇಕಾರ್, ವಿರೂಪಾಕ್ಷಯ್ಯ ಮಠಪತಿ ಇನ್ನಿತರರು ಇದ್ದರು.